‘ಸಿಬಿಐ ಅಲ್ಲ ಟ್ರಂಪ್ ಕಡೆಯಿಂದಲೂ ತನಿಖೆ ಮಾಡಿಸಲಿ’ : ಬಿಎಸ್‌ವೈಗೆ ಹೆಚ್‌ಡಿಕೆ ಚಾಲೆಂಜ್..!

ಈ ಸುದ್ದಿಯನ್ನು ಶೇರ್ ಮಾಡಿ

ಧರ್ಮಸ್ಥಳ, ಆ.18- ಟೆಲಿಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಸಿಬಿಐ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಿದರೂ ಸಂಪೂರ್ಣ ಸ್ವಾಗತಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಯಾವುದೇ ತಪ್ಪು ಮಾಡಿಲ್ಲ. ಆತ್ಮ ಸಾಕ್ಷಿಗೆ ಅನುಗುಣವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೆಲಸ ಮಾಡಿದ್ದೇನೆ. ಯಾವ ತನಿಖೆ ಮಾಡಿದರೂ ಹೆದರುವುದಿಲ್ಲ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ಅಪ್ಪ ಮಕ್ಕಳನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು. ಕೊನೆಗೆ ಏನಾಯಿತು ಎಂದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ತಮ್ಮ ಬಗ್ಗೆ ತಮಗೆ ಕಡಿವಾಣ ಹಾಕಲು ಯಡಿಯೂರಪ್ಪ ಅವರು 10 ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

2008ರಿಂದ ಮೂರು ವರ್ಷಗಳ ಕಾಲ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿದ್ದರು. ತಾವು 14 ತಿಂಗಳು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದು ಈ ಎಲ್ಲರ ಅವಧಿಗೊಳಗೊಂಡಂತೆ 15 ವರ್ಷದ ಬಗ್ಗೆಯೂ ತನಿಖೆಗೆ ಒಪ್ಪಿಸಲಿ ಎಂದು ಆಗ್ರಹಿಸಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಹೇಳಿ ಅಲ್ಲಿಂದ ದೊಡ್ಡ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿದರೂ ತಾವು ತಪ್ಪು ಮಾಡಿರುವುದನ್ನು ಸಾಬೀತು ಪಡಿಸಲಾಗದು ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವಿಗೆ ಸ್ಪಂದಿಸಿ ಟೆಲಿಫೋನ್ ಕದ್ದಾಲಿಕೆ ಆರೋಪವನ್ನು ಸಿಬಿಐ ತನಿಖೆಗೆ ವಹಿಸಿರುವುದಾಗಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಮನವಿಗೆ ಸ್ಪಂದಿಸಿ ಗೌರವ ಕೊಟ್ಟಿರುವುದಕ್ಕೆ ಯಡಿಯೂರಪ್ಪ ಅವರಿಗೆ ವಿಶೇಷವಾದ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದರು.

ತನಿಖೆಯಿಂದ ರಾಜಕೀಯ ಒಳ ಒಪ್ಪಂದವೂ ಗೊತ್ತಾಗಲಿದೆ. ಯಾರ ಕಾಲದಲ್ಲಿ ಫೋಲೀಸ್ ಇಲಾಖೆ ನಡೆದುಕೊಂಡಿದ್ದಾರೆ ಎಂಬುದು ಗೊತ್ತಾಗಲಿ ಎಂದರು. ಮೈತ್ರಿ ಸರ್ಕಾರಕ್ಕೂ ಮುನ್ನ ಯಡಿಯೂರಪ್ಪ ಅವರು ಇಂಟೆಲಿಜೆನ್ಸ್ ಮುಖ್ಯಸ್ಥ ಸ್ಥಾನಕ್ಕೆ ಯಾರನ್ನು ನೇಮಕ ಮಾಡಿಕೊಂಡಿದ್ದರೋ ಅವರನ್ನೇ ತಾವು 10 ತಿಂಗಳು ಮುಂದುವರೆಸುವುದಾಗಿ ಹೇಳಿದರು.

ಚೆಲ್ಲಾಟ ಬೇಡ: ಪ್ರವಾಹ ಪೀಡಿತ ಸಂತ್ರಸ್ತರ ವಿಚಾರದಲ್ಲಿ ರಾಜ್ಯ ಸರ್ಕಾರ ಚೆಲ್ಲಾಟ ಆಡಬಾರದು. ಅವರಿಗೆ ತಾತ್ಕಾಲಿಕ ಪರಿಹಾರದ ಜತೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ.

ಯುಪಿಎ ಸರ್ಕಾರವಿದ್ದಾಗ ಯಡಿಯೂರಪ್ಪ ಅವರೇ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದರು. ಆಗ ಕೇಂದ್ರ ಸರ್ಕಾರ ತಕ್ಷಣ ಒಂದು ಸಾವಿರ ಕೋಟಿ ರೂ.ವನ್ನು ರಾಜ್ಯಕ್ಕೆ ನೀಡಿತ್ತು. ಈಗ ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿ ಇದ್ದರೂ ಕೇಂದ್ರದಿಂದ ನೆರೆ ಪರಿಹಾರಕ್ಕೆ ಹಣ ಬಿಡುಗಡೆ ಭರವಸೆ ಸಿಕ್ಕಿಲ್ಲ.

ಸಮರೋಪಾದಿಯಲ್ಲಿ ಜನರಿಗೆ ಸ್ಪಂದಿಸುವ ಕೆಲಸವಾಗಬೇಕಿದೆ ಎಂದರು. ತಮ್ಮ ಪಕ್ಷದ ವತಿಯಿಂದಲೂ ಸಾಧ್ಯವಾದಷ್ಟು ಮಟ್ಟಿಗೆ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

Facebook Comments

Sri Raghav

Admin