ವಿಶ್ವಾಸ ಮತಯಾಚನೆ ದಾಳ ಉರುಳಿಸಿದ ಸಿಎಂ, ಬಿಜೆಪಿಗೆ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.12-ರಾಜ್ಯ ರಾಜಕೀಯದಲ್ಲಿ ಅನಿರೀಕ್ಷಿತ ಹಾಗೂ ಮಹತ್ವದ ಬೆಳವಣಿಗೆಯಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ವಯಂಪ್ರೇರಿತರಾಗಿ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಮುಂದಾಗಿದ್ದಾರೆ.

ಮಳೆಗಾಲದ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭವಾಯಿತು. ಮಧ್ಯಾಹ್ನ 12.50ಕ್ಕೆ ಕಲಾಪ ಶುರುವಾಗಿ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಇತ್ತೀಚೆಗೆ ನಿಧನರಾದ ಸಚಿವ ಸಿ.ಎಸ್.ಶಿವಳ್ಳಿ, ಮಾಜಿ ಶಾಸಕರು ಹಾಗೂ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯ ಮಂಡಿಸಿದರು.

ಅಗಲಿದ ಗಣ್ಯರ ಬಗ್ಗೆ ವಿವರಣೆ ನೀಡಿದ ಬಳಿಕ ಸ್ಪೀಕರ್ ರಮೇಶ್‍ಕುಮಾರ್ ಅವರು ಬಹಳ ದಿನಗಳ ನಂತರ ಕಲಾಪ ಸಮಾವೇಶಗೊಂಡಿದೆ. ನಿಧನರಾದವರ ಬಗ್ಗೆ ಆಯಾ ಕ್ಷೇತ್ರದ ಶಾಸಕರು ಮಾತನಾಡಲಿ. ಸ್ವಲ್ಪ ಸಮಯಾವಕಾಶವಾದರೂ ಚಿಂತೆಯಿಲ್ಲ.

ಎಲ್ಲರಿಗೂ ತಾಳ್ಮೆ ಇರಲಿ. ಸಂತಾಪ ಸೂಚನೆಯನ್ನು ತಾಳ್ಮೆಯಿಂದ ನಡೆಸೋಣ ಎಂದು ಸಲಹೆ ನೀಡಿದರು. ನಂತರ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಲು ಸಭಾನಾಯಕರಾದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅವಕಾಶ ಮಾಡಿಕೊಟ್ಟರು.

ಮಾತನಾಡಲು ಆರಂಭಿಸಿದ ಕುಮಾರಸ್ವಾಮಿ ಅವರು, ಸಂತಾಪ ಸೂಚಕ ನಿರ್ಣಯಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಈ ದಿನದ ಅಧಿವೇಶನ ಸಂತಾಪ ಸೂಚನೆಗಷ್ಟೇ ಸೀಮಿತವಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಾನು ಸಂತಾಪ ಸೂಚನೆಗೂ ಮೊದಲು ನನ್ನ ಕೆಲ ಮಾತುಗಳನ್ನು ಹೇಳಬೇಕಿದೆ ಎಂದು ಸ್ಪೀಕರ್‍ಗೆ ಮನವಿ ಮಾಡಿದರು.

ರಾಜಕೀಯ ಪ್ರಕ್ರಿಯೆಗಳಿಗೆ ಚಾಲನೆ ಸಿಕ್ಕಿದೆ. ಹಲವು ಶಾಸಕರ ನಿರ್ಣಯದಿಂದ ಗೊಂದಲ ಉಂಟಾಗಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಈ ಕುರ್ಚಿಯಲ್ಲಿ ಶಾಶ್ವತವಾಗಿ ಕೂರುತ್ತೇನೆ ಎಂದುಕೊಂಡು ನಾನು ಇಲ್ಲಿಗೆ ಬಂದಿಲ್ಲ.

ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದ ಅವರು, ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ನಾನು ವಿಶ್ವಾಸ ಮತಯಾಚನೆ ಮಾಡಲು ನಿರ್ಧರಿಸಿದ್ದೇನೆ. ಸದನದ ಬೆಂಬಲ ಇಲ್ಲದ ಹೊರತು ನಾನು ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಸರಿಹೋಗುವುದಿಲ್ಲ. ಸದನದ ಬೆಂಬಲ ಇಲ್ಲದೆ ಈ ಮನೆಯನ್ನು ದುರುಪಯೋಗ ಪಡಿಸಿಕೊಳ್ಳಲು ನಾನು ಸಿದ್ಧನಿಲ್ಲ.

ಹಾಗಾಗಿ ವಿಶ್ವಾಸಮತಯಾಚನೆ ಮಾಡಲು ನಿರ್ಧರಿಸಿದ್ದೇನೆ. ಅದಕ್ಕೆ ಸೂಕ್ತ ದಿನಾಂಕ, ಸಮಯ ನಿಗದಿ ಮಾಡಿ ಎಂದು ಸ್ಪೀಕರ್ ಅವರಲ್ಲಿ ಮನವಿಮಾಡಿದರು. ಮುಖ್ಯಮಂತ್ರಿಯವರ ಈ ಹೇಳಿಕೆ ಮತ್ತು ನಿಲುವು ಅಧಿವೇಶನದಲ್ಲಿ ಒಂದು ಕ್ಷಣ ಶಾಕ್ ನೀಡಿತು. ಯಾರೂ ನಿರೀಕ್ಷಿಸದೆ ಇದ್ದಾಗ ಏಕಾಏಕಿ ಮುಖ್ಯಮಂತ್ರಿಯವರು ವಿಶ್ವಾಸ ಮತ ಯಾಚನೆಯ ನಿರ್ಣಯ ಕೈಗೊಂಡಿದ್ದಾರೆ.

ಇತ್ತೀಚಿನ ಬೆಳವಣಿಗೆಗಳಲ್ಲಿ ಶಾಸಕರಾದ ಆನಂದ್‍ಸಿಂಗ್, ರಮೇಶ್ ಜಾರಕಿ ಹೊಳಿ, ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿ ಹೊಳಿ, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ರಾಮಲಿಂಗಾರೆಡ್ಡಿ, ಎಚ್.ವಿಶ್ವನಾಥ್, ಗೋಪಾಲಯ್ಯ ಸೇರಿದಂತೆ ಜೆಡಿಎಸ್ ಮೂವರು, ಕಾಂಗ್ರೆಸ್‍ನ ಏಳು ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ
.
ಎರಡನೇ ಹಂತದಲ್ಲಿ ರೋಷನ್‍ಬೇಗ್ ರಾಜೀನಾಮೆ ನೀಡಿದ್ದು, ಮೂರನೇ ಹಂತದಲ್ಲಿ ಸಚಿವ ಎಂ.ಟಿ.ಬಿ.ನಾಗರಾಜ್, ಸುಧಾಕರ್ ಅವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ್ದ ಎಲ್ಲಾ ಶಾಸಕರು ಸದನಕ್ಕೆ ಗೈರು ಹಾಜರಾಗಿದ್ದರು.

ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್‍ನ 118 ಸಂಖ್ಯಾಬಲ ಹೊಂದಿದ್ದ ಶಾಸಕರ ಸಂಖ್ಯಾಬಲ ಈಗ 102ಕ್ಕೆ ಕುಸಿದಿದೆ. ಪಕ್ಷೇತರರಾಗಿರುವ ರಾಣೆಬೆನ್ನೂರಿನ ಆರ್.ಶಂಕರ್, ಮುಳಬಾಗಿಲಿನ ನಾಗೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

105 ಮಂದಿ ಶಾಸಕರನ್ನು ಹೊಂದಿದ್ದ ಬಿಜೆಪಿಯ ಸಂಖ್ಯಾಬಲ 107ಕ್ಕೇರಿದೆ. ಇಂದು ಕಲಾಪಕ್ಕೆ ಹಲವರು ಗೈರು ಹಾಜರಾಗಿದ್ದರು. ಎಲ್ಲ ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಲೇಬೇಕೆಂದು ಎರಡೂ ಪಕ್ಷಗಳು ವಿಪ್ ನೀಡಿವೆ. ಆದರೆ ಕೆಲವು ಶಾಸಕರು ವಿವಿಧ ಕಾರಣಗಳ ನೆಪವೊಡ್ಡಿ ಗೈರು ಹಾಜರಾಗಿದ್ದಾರೆ.

ಈ ಸಂಕಷ್ಟಕರ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ವಿಶ್ವಾಸ ಮತಯಾಚನೆಯಂತಹ ಹೇಳಿಕೆ ನೀಡಿರುವುದು ಮಿತ್ರ ಪಕ್ಷ ಕಾಂಗ್ರೆಸ್ಸನ್ನೇ ಅಚ್ಚರಿಗೆ ದೂಡಿದೆ. ಒಟ್ಟಿನಲ್ಲಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆಗೆ ಸಮಯ ಕೇಳಿದ್ದು, ಸ್ಪೀಕರ್ ಅವರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮುಖ್ಯಮಂತ್ರಿಯವರ ಈ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin