‘ಕಾಲ’ನ ಎಂಟ್ರಿಗೆ ಕರ್ನಾಟಕದಲ್ಲಿ ಅಡ್ಡಗಾಲು, ರಾಜ್ಯದಲ್ಲಿ ಬಿಡುಗಡೆ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Kaala--01

ಬೆಂಗಳೂರು, ಜೂ.7- ಸ್ವತಃ ಸೂಪರ್ ಸ್ಟಾರ್ ರಜನಿಕಾಂತ್ ಅವರೇ ಕಾಲಾ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿಕೊಂಡರೂ ರಾಜ್ಯದ ಯಾವುದೇ ಭಾಗದಲ್ಲೂ ಇಂದು ಕಾಲಾ ಚಿತ್ರ ಪ್ರದರ್ಶನಕ್ಕೆ ಕಾಲ ಕೂಡಿಬರಲಿಲ್ಲ. ಕಾಲಾ ಚಿತ್ರ ಪ್ರದರ್ಶನಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಂದು ಚಿತ್ರ ಬಿಡುಗಡೆಯಾಗಿತ್ತು.

ನ್ಯಾಯಾಲಯದ ಆದೇಶದಂತೆ ಕಾಲಾ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕಾವೇರಿ ವಿಚಾರದಲ್ಲಿ ತಮಿಳುನಾಡು ಪರ ವಕಾಲತು ವಹಿಸಿದ್ದ ರಜನಿ ಧೋರಣೆಯನ್ನು ಖಂಡಿಸಿರುವ ಕನ್ನಡಪರ ಹೋರಾಟಗಾರರು ಯಾವುದೇ ಕಾರಣಕ್ಕೂ ಕಾಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಮನವಿಗೆ ಚಿತ್ರಮಂದಿರದ ಮಾಲೀಕರು ಸ್ಪಂದಿಸಿದ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಭಾಗಗಳಲ್ಲೂ ಇಂದು ಕಾಲಾ ಚಿತ್ರ ಪ್ರದರ್ಶನಗೊಳ್ಳಲಿಲ್ಲ. ಕಾಲಾ ಚಿತ್ರ ಬಿಡುಗಡೆಗೆ ವಿಘ್ನ ಎದುರಾಗಿದ್ದ ಹಿನ್ನೆಲೆಯಲ್ಲಿ ಯಾವೊಬ್ಬ ಚಿತ್ರ ವಿತರಕರೂ ಚಿತ್ರ ವಿತರಣೆಗೆ ಮನಸ್ಸು ಮಾಡದ ಹಿನ್ನೆಲೆಯಲ್ಲಿ ಕನಕಪುರ ಶ್ರೀನಿವಾಸ್ ಅವರು ಚಿತ್ರದ ಪ್ರಸಾರ ಹಕ್ಕನ್ನು ಖರೀದಿಸಿ ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡಿದ್ದರು.

WhatsApp Image 2018-06-07 at 10.47.24 AM

ನಗರದ ಊರ್ವಶಿ, ಲಿಡೋ ಚಿತ್ರಮಂದಿರ ಸೇರಿದಂತೆ ಹಲವಾರು ಮಾಲ್ ಮತ್ತು ಮಲ್ಟಿಪ್ಲೆಕ್ಸ್‍ಗಳಲ್ಲೂ ಕಾಲಾ ಚಿತ್ರ ಬಿಡುಗಡೆ ಮಾಡಲಾಗಿತ್ತು. ಆದರೆ, ಚಿತ್ರ ಬಿಡುಗಡೆ ಮಾಡಬೇಡಿ ಎಂಬ ಕನ್ನಡಪರ ಹೋರಾಟಗಾರರು ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಮಾಲೀಕರು ಚಿತ್ರ ಪ್ರದರ್ಶನ ರದ್ದುಗೊಳಿಸಿದ್ದಾರೆ. ಕಾಲಾ ಚಿತ್ರ ವೀಕ್ಷಣೆಗೆ ಆಗಮಿಸಿದ್ದ ಬೆರಳೆಣಿಕೆ ಪ್ರೇಕ್ಷಕರನ್ನು ಮಾಲ್ ಮತ್ತು ಚಿತ್ರಮಂದಿರಗಳ ಮಾಲೀಕರು ಮನವೊಲಿಸಿ ವಾಪಸ್ ಕಳುಹಿಸಿದರು. ರಜನಿಕಾಂತ್ ಚಿತ್ರಗಳು ಬಿಡುಗಡೆಗೊಂಡಾಗ ರಾತ್ರೋರಾತ್ರಿ ಚಿತ್ರ ಪ್ರದರ್ಶನಗೊಳ್ಳುವುದು ಮಾಮೂಲು. ಆದರೆ, ಈ ಬಾರಿ ಯಾವ ಚಿತ್ರಮಂದಿರಗಳಲ್ಲೂ ಕಾಲಾ ರಾತ್ರಿ ಪ್ರದರ್ಶನಗೊಳ್ಳಲಿಲ್ಲ.

WhatsApp Image 2018-06-07 at 10.49.26 AM

ಮೈಸೂರು ವರದಿ:

ಹಲವಾರು ಕನ್ನಡಪರ ಸಂಘಟನೆಗಳು ಮೈಸೂರಿನ ಚಿತ್ರಮಂದಿರಗಳ ಮಾಲೀಕರ ಜತೆ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಅಲ್ಲಿನ ಚಿತ್ರಮಂದಿರಗಳಲ್ಲಿ ಕಾಲಾ ಚಿತ್ರ ಪ್ರದರ್ಶಿಸದಿರಲು ಮಾಲೀಕರು ಸಮ್ಮತಿ ವ್ಯಕ್ತಪಡಿಸಿದ್ದಾರೆ.  ನಗರದ ಡಿಆರ್‍ಸಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ವ್ಯವಸ್ಥಾಪಕಿ ವೈಶಾಲಿ ಪದಕಿ ಅವರು ಮಾತನಾಡಿ, ಕಾಲಾ ಚಿತ್ರದ ರಹದಾರಿ ಪಡೆದುಕೊಂಡಿದ್ದೇವೆ. ಆದರೆ, ಚಿತ್ರ ಬಿಡುಗಡೆ ಮಾಡದಿರುವಂತೆ ಕನ್ನಡಪರ ಹೋರಾಟಗಾರರು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಚಿತ್ರ ಪ್ರದರ್ಶನಕ್ಕೆ ತಡೆ ಹಿಡಿದಿದ್ದೇವೆ. ಬೆಂಗಳೂರಿನ ಪರಿಸ್ಥಿತಿ ಗಮನಿಸಿ ಮುಂದೆ ತಮ್ಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು. ಅದೇ ರೀತಿ ಮೈಸೂರಿನ ಯಾವುದೇ ಚಿತ್ರಮಂದಿರಗಳಲ್ಲೂ ಕಾಲಾ ಚಿತ್ರ ಪ್ರದರ್ಶನಗೊಳ್ಳಲಿಲ್ಲ.

Kalaa

ಚಾಮರಾಜನಗರ, ಬಳ್ಳಾರಿ, ಕೋಲಾರ, ದಾವಣಗೆರೆ, ಬೆಳಗಾಂ, ಮಂಗಳೂರು, ರಾಯಚೂರು ಮತ್ತಿತರ ಜಿಲ್ಲೆಗಳಲ್ಲೂ ಕಾಲಾ ಚಿತ್ರ ಇಂದು ಬಿಡುಗಡೆಗೊಂಡಿದ್ದರೂ ಎಲ್ಲೂ ಪ್ರದರ್ಶನಗೊಳ್ಳಲಿಲ್ಲ. ಕೆಲವೆಡೆ ಕಾಲಾ ಚಿತ್ರಕ್ಕೆ ಟಿಕೆಟ್ ನೀಡಲಾಗಿದ್ದರೂ ಇಂದು ಚಿತ್ರಮಂದಿರಗಳಿಗೆ ಬಂದ ಪ್ರೇಕ್ಷಕರಿಗೆ ಟಿಕೆಟ್ ಹಣ ಹಿಂದಿರುಗಿಸಿ ವಾಪಸ್ ಕಳುಹಿಸಲಾಯಿತು.

Facebook Comments

Sri Raghav

Admin