ವಿಧಾನಸಭೆ ವಿಶೇಷ ಅಧಿವೇಶನ ಕರೆಯಲು ವಿಧಾನಸಭಾಧ್ಯಕ್ಷರಿಗೆ ಹೆಚ್‌ಡಿಕೆ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ. 25- ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ, ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ, ಎಲ್ಲಕ್ಕಿಂತಲೂ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ವಿಚಾರದಲ್ಲಿ ಆಗುತ್ತಿರುವ ಹಿನ್ನಡೆಗಳ ಕುರಿತು ಚರ್ಚಿಸಲು ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ರಾಜ್ಯಪಾಲರು ಹಾಗೂ ವಿಧಾನಸಭಾಧ್ಯಕ್ಷರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ‌.

ಈ ಸಂಬಂಧ ರಾಜ್ಯಪಾಲರಾದ ವಜುಭಾಯಿವಾಲ ಹಾಗೂ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪ್ರತ್ಯೇಕ ಪತ್ರ ಬರೆದು ಅವರು ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದಾರೆ‌. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಅತ್ಯಂತ ಗಂಭೀರ ಪರಿಸ್ಥಿತಿಗೆ ತಲುಪಿದ್ದು, ಅದರ ನಿಯಂತ್ರಣಕ್ಕಾಗಿ ಧೀರ್ಘ ಕಾಲದ ಲಾಕ್‌ಟೌನ್ ಜಾರಿ ಮಾಡಿದ್ದು ತಮಗೆ ಗೊತ್ತಿರುವ ವಿಚಾರವಾಗಿದೆ. ಕೋವಿಡ್ ತಂದೊಡ್ಡಿದ ಸಂಕಷ್ಟದಿಂದಾಗಿ ಒಂದೆಡೆ ಜೀವ ಹಾನಿಯಾಗಿದ್ದರೆ, ಮತ್ತೊಂದು ಕಡೆ ಜನರ ಜೀವನಕ್ಕೂ ಹಾನಿಯಾಗಿದೆ. ಆದರೆ, ಜೀವ, ಜೀವನಕ್ಕಾದ ತೊಂದರೆಗೆ ಸರ್ಕಾರ ನೀಡಿದ ಪರಿಹಾರ ಸೂಕ್ತವಾದುದ್ದಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಲಾಕ್‌ಡೌನ್‌ಗೆ ಪರಿಹಾರವಾಗಿ ಸರ್ಕಾರ ಘೋಷಿಸಿದ ಪ್ಯಾಕೇಜ್ ಅತ್ಯಂತ ಅಲ್ಪ ಪ್ರಮಾಣದ್ದು. ಸರ್ಕಾರ ಪ್ಯಾಕೇಜ್ ಘೋಷಣೆ ಮಾಡುವುದಕ್ಕೂ ಮೊದಲು ಸರ್ವ ಪಕ್ಷಗಳ ಅಭಿಪ್ರಾಯವನ್ನು ಒಮ್ಮೆ ಕೇಳಬೇಕಿತ್ತು. ರಾಜ್ಯದ 224 ಕ್ಷೇತ್ರಗಳ ಪ್ರತಿನಿಧಿಗಳ ಮಾತುಗಳನ್ನು ಕೇಳಬೇಕಿತ್ತು. ಆದರೆ, ಇದ್ಯಾವುದೂ ಆಗಿಲ್ಲ. ಅತ್ತ, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ನೀಡಲಾಗುತ್ತಿರುವ ಪರಿಹಾರದಲ್ಲಿ ಸರ್ಕಾರ ತಾರತಮ್ಯ ಮತ್ತು ಜಿಪುಣತೆಗಳನ್ನು ಪ್ರದರ್ಶಿಸಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬಿಪಿಎಲ್ ಕಾರ್ಡುದಾರರಿಗೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದ ಸರ್ಕಾರ, ಅದರಲ್ಲಿಯೂ ಎಲ್ಲರಿಗೂ ನೀಡದೇ ಮಾನದಂಡಗಳನ್ನು ವಿಧಿಸುತ್ತಿದೆ, ಇದರ ಜೊತೆಗೆ, ಬಡ, ಮಧ್ಯಮ ವರ್ಗವೂ ಆಶಕ್ತ ಸಮುದಾಯವೇ ಆಗಿದ್ದು, ಅವರಿಗೂ ಪರಿಹಾರ ನೀಡಬೇಕಿತ್ತು. ಪರಿಹಾರದ ಮೊತ್ತ ಹೆಚ್ಚಾಗಬೇಕಿತ್ತು ಎಂದಿದ್ದಾರೆ.

ಸದ್ಯ ಕೋವಿಡ್ ಮೂರನೇ ಅಲೆ ಬಾಗಿಲ ಬಳಿ ಬಂದು ನಿಂತಿದೆ. ಹಿಂದಿನ ವೈಫಲ್ಯಗಳು, ಮುಂದೆ ಆಗಬೇಕಾದ್ದನ್ನು ಸೂಕ್ತ ರೀತಿಯಿಂದ ಚರ್ಚಿಸಲು ಸಮರ್ಥವಾಗಿ ಮುಂದಡಿ ಇಡಲು ವಿಶೇಷ ಅಧಿವೇಶನ ಕರೆಯುವ ಅಗತ್ಯವಿದೆ. ಎಲ್ಲರ ಅಭಿಪ್ರಾಯವನ್ನು ಕೇಳಿ ಮುಂದುವರಿಯುವುದು ಪ್ರಜಾಸತ್ತಾತ್ಮಕ ಮಾರ್ಗವಾಗಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ‌
ರಾಜ್ಯ ಸರ್ಕಾರದ ಮೇಲೆ ಭಾರಿ ಪ್ರಮಾಣದ, ಗಂಭೀರವಾದ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ನೀರಾವರಿ ಇಲಾಖೆ ಯೋಜನೆಯ 20,000 ಕೋಟಿ ರೂ. ಟೆಂಡರ್‌ನಲ್ಲಿ ಶೇ.10 ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆಡಳಿತ ಪಕ್ಷದ ಹಿರಿಯ ಶಾಸಕರೇ ಆರೋಪಿಸಿದ್ದಾರೆ.

ಅಲ್ಲದೆ, ಇದರಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಇದರ ತನಿಖೆಗೆ ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿರುವ ತಾವು ಇದರ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಬ್ಕಾರಿ ಇಲಾಖೆಯ ಮಂತ್ರಿಯು ಪ್ರತಿ ಜಿಲ್ಲೆಯಿಂದಲೂ ಲಂಚದ ಹಣ ಅಪೇಕ್ಷಿಸುತ್ತಿರುವುದು, ಹಣ ಸಂಗ್ರಹ ಮಾಡದೇ ಹೋದರೆ ಅಧಿಕಾರಿಗಳು ಕೆಂಗಣ್ಣಿಗೆ ಗುರಿಯಾಗುವ ಅಪಾಯಗಳಿರುವುದರ ಬಗ್ಗೆ ಧ್ವನಿಮುದ್ರಿಕೆಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಈ ಪ್ರಕರಣದಲ್ಲಿ ಸರ್ಕಾರ ತಾರತಮ್ಯ ಧೋರಣೆಯಿಂದ ನಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಬ್ಕಾರಿ ಇನ್ಸ್‌ಪೆಕ್ಟರ್‌ಗಳನ್ನು ಸರ್ಕಾರ ಅಮಾನತು ಮಾಡಿತ್ತು. ಆದರೆ, ಮಂತ್ರಿ ಮತ್ತು ಉನ್ನತ ಅಧಿಕಾರಿಗಳನ್ನು ಸರ್ಕಾರ ರಕ್ಷಣೆ ಮಾಡಿಕೊಂಡಿದೆ. ಸರ್ಕಾರ ಒಂದೆಡೆ ಭ್ರಷ್ಟಾಚಾರ ಮಾಡುತ್ತಿದ್ದರೆ, ಮತ್ತೊಂದೆಡೆ ಸ್ವಜನ ಪಕ್ಷಪಾತ ಮಾಡುತ್ತಿದೆ ಎಂದು ಅವರು ಪತ್ರದಲ್ಲಿ ಟೀಕಿಸಿದ್ದಾರೆ.

ಲಂಚದ ಆರೋಪದ ಮೇಲೆ ಈ ಇಲಾಖೆಯ ಹಿಂದಿನ ಮಂತ್ರಿಯಿಂದ ಸರ್ಕಾರ ರಾಜೀನಾಮೆ ಪಡೆದಿತ್ತು. ಆದರೆ, ಈಗಿನ ಮಂತ್ರಿಯನ್ನು ರಕ್ಷಣೆ ಮಾಡಿಕೊಳ್ಳುತ್ತಿದೆ. ಇದರ ಬಗ್ಗೆ ತನಿಖೆ ಅಗತ್ಯವಿದೆ. ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿರುವ ಈ ಬೆಳವಣಿಗೆಗಳ ಕುರಿತು ಸದನದಲ್ಲಿ ಚರ್ಚೆ ಮಾಡಬೇಕಾದ ಅಗತ್ಯವಿದೆ ಎಂಬುದನ್ನು ತಾವು ಮನಗಾಣಬೇಕು ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗರಿಗೆ ಹಿನ್ನಡೆಗಳಾಗುತ್ತಿದೆ. ನಾವು ಹೋರಾಡುತ್ತಿರುವುದು, ರಾಜಕಾರಣ ಮಾಡುತ್ತಿರುವುದು, ಸರ್ಕಾರ ಮಾಡಬೇಕೆಂದಿರುವುದು ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ, ಕನ್ನಡಿಗರಿಗಾಗಿ. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚು ಪೆಟ್ಟು ಬೀಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರದ ನೂತನ ಶಿಕ್ಷಣ ನೀತಿಯ ಅಡಿಯಲ್ಲಿ ನಾಲ್ಕು ವರ್ಷಗಳ ಪದವಿ ತರಗತಿಗಳಲ್ಲಿ ಕನ್ನಡ ಕಲಿಕೆಗೆ ಒಂದೇ ವರ್ಷದ ಆದ್ಯತೆ ನೀಡುವುದು, ಭಾಷೆಗಳ ಕಲಿಕಾ ತರಬೇತಿಯಲ್ಲಿ ಲೋಕಸಭೆಯೇ ಕನ್ನಡವನ್ನು ಕಡೆಗಣಿಸುವುದು, ಬ್ಯಾಂಕಿಂಗ್ ಸೇವೆಯಲ್ಲಿ ಕನ್ನಡದ ನಿರ್ಲಕ್ಷ್ಯ, ಕರ್ನಾಟಕದ ಹುದ್ದೆಗಳಲ್ಲಿ ಕನ್ನಡಿಗರಿಗೆ ಸ್ಥಾನವಿಲ್ಲದೇ ಇರುವುದರ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು.

ಅಂತರ್ಜಾಲದಲ್ಲಿ ಕನ್ನಡ-ಕನ್ನಡಿಗರಿಗೆ ಅಪಮಾನ, ಕರ್ನಾಟಕದ ಮೇಕೆದಾಟು ಯೋಜನೆಯನ್ನು ತಡೆಯುವ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ಜಂಟಿ ಪ್ರಯತ್ನಗಳು, ಅನುದಾನ-ಪರಿಹಾರ-ಔಷಧ ಪೂರೈಕೆಗಳಲ್ಲಿ ಆಗುತ್ತಿರುವ ತಾರತಮ್ಯ, ಬೆಳಗಾವಿ ವಿಚಾರದಲ್ಲಿನ ಮಹಾರಾಷ್ಟ್ರದ ತಗಾದೆ, ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಲು ಇರುವ ತೊಡಕುಗಳು ಮತ್ತು ಎಲ್ಲದಕ್ಕೂ ಮುಖ್ಯವಾಗಿ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯತೆ ಪಡೆದಿರುವ ಕನ್ನಡಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಧಿಕೃತ ಭಾಷೆ ಸ್ಥಾನಮಾನ ಕೊಡಿಸುವುದು.

ಅದರಿಂದಾಗುವ ಉಪಯೋಗಗಳ ಕುರಿತಂತೆ ಚರ್ಚೆಯಾಗಬೇಕಾಗಿದೆ. ನಮ್ಮ ಅಸ್ಮಿತೆಗೆ ಸಂಬಂಧಿಸಿದ ವಿಚಾರಗಳ ಕುರಿತು ವಿಧಾನಸಭೆಯಲ್ಲಿ ಮಾತುಕತೆಗಳು ನಡೆಯಬೇಕು. ಈ ಎಲ್ಲ ಕಾರಣಗಳಿಗಾಗಿ ತಾವು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ಪತ್ರದಲ್ಲಿ ಹೆಚ್.ಡಿ.ಕೆ. ಕೋರಿದ್ದಾರೆ.

Facebook Comments