“ಯಡಿಯೂರಪ್ಪನವರಿಗೆ ಆದ ಅನುಭವವೇ ನನಗೀಗ ಆಗುತ್ತಿದೆ” : ಇಲ್ಲಿದೆ ಸಿಎಂ ಭಾಷಣದ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.19- ವಿರೋಧ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗಾಗಿದ್ದ ನೋವಿನ ಅನುಭವವೇ ಇಂದು ನನಗೂ ಆಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು.

ವಿಧಾನಸಭೆಯಲ್ಲಿ ನಿನ್ನೆ ಮಂಡಿಸಿದ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಚಿವ ಸಂಪುಟಸಭೆಯಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ ಎಂಬ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದುವರೆಸಿದ ಮುಖ್ಯಮಂತ್ರಿಗಳು 2009ರಲ್ಲಿ ಯಡಿಯೂರಪ್ಪ ಅವರ ವಿರುದ್ಧ ಅವರದೇ ಸರ್ಕಾರದ ಸಚಿವರು ಮತ್ತು ಶಾಸಕರು ಬಂಡಾಯವೆದ್ದಾಗ ಯಾವ ಪರಿಸ್ಥಿತಿ ಇತ್ತು.

ಅಂತಹ ಪರಿಸ್ಥಿತಿ ಈಗ ನನಗೆ ಆಗಿದೆ. ಆಗ ಅವರು ತಪ್ಪಾಗಿದೆ. ತಿದ್ದಿಕೊಳ್ಳುವೆ ಕಾಪಾಡಿ ಎಂದೆಲ್ಲಾ ಹೇಳಿದ್ದರು. ಆದರೆ, ನಾನು ಅಧಿಕಾರಕ್ಕಾಗಿ ಅಂಗಲಾಚುವುದಿಲ್ಲ ಎಂದು ಹೇಳಿದರು. ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಇಂದು ನಾಯಕತ್ವ ವಹಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ನನಗೆನೂ ಅಸೂಯೆ ಇಲ್ಲ. ತರಾತುರಿ ಮಾಡುತ್ತಿದ್ದೀರಿ. ವಿಶ್ವಾಸ ಮತ ಸಾಬೀತು ಪಡಿಸುವುದು ಸೋಮವಾರವೂ ಆಗಬಹುದು. ಮಂಗಳವಾರವೂ ಆಗಬಹದು. ಅಧಿಕಾರಕ್ಕೆ ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಿಡಿಸಿದರು.

ಆಗ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಲು ತಮ್ಮನ್ನು ದುರ್ಬಳಕೆ ಮಾಡಿಕೊಂಡರು. ಆದರೆ ನಾನು ಅಧಿಕಾರ ದುರುಪಯೋಗ ಮಾಡಿಕೊಳ್ಳುವುದಿಲ್ಲ. ಅಂದು 8 ಸಚಿವರು, 10 ಶಾಸಕರು ಬಂಡಾಯವೆದ್ದು ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದಿದ್ದರು.

ಅದಕ್ಕೆ ನಾನು ಪ್ರೊತ್ಸಾಹ ನೀಡಿದ್ದಿಲ್ಲ. ವಿಶ್ವಾಸ, ಸ್ನೇಹ, ನೋವಿಗೆ ಸ್ಪಂದಿಸಿದ್ದು ನಮ್ಮ ದೌರ್ಬಲ್ಯ. ಆಗ ನಡೆದ ಎರಡು ತಿಂಗಳ ಡ್ರಾಮಾಕ್ಕೆ ನಾನು ಬಲಿಯಾಗಬೇಕಾಯಿತು ಎಂದು ಆಗಿನ ಅನುಭವಗಳನ್ನು ಮೆಲುಕು ಹಾಕಿದರು. ಆಗ ಅನುಭವಿಸಿದ ನೋವು ನನಗೆ ಮಾತ್ರ ಗೊತ್ತಿದೆ ಎಂದು ನೊಂದು ನುಡಿದರು.

# ಧರ್ಮಸಿಂಗ್ ಸಾವಿಗೆ ನಾವು ಕಾರಣರಲ್ಲ:
ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಸಾವಿಗೆ ನಾವು ಕಾರಣರಲ್ಲ. ಲೋಕಸಭೆಯಲ್ಲೇ ಅಕ್ಕಪಕ್ಕದಲ್ಲೇ ಕುಳಿತಿದ್ದೆವು. ಅವರಿಗೆ ನಾವು ಮೋಸ ಮಾಡಿಲ್ಲ. ಎಲ್ಲವೂ ವಿಧಿಯಾಟ ಎಂದರು. ಧರ್ಮಸಿಂಗ್ ಅವರ ಬೆನ್ನಿಗೆ ಚೂರಿಗೆ ಹಾಕಿ ಅವರ ಸಾವಿಗೆ ಕಾರಣವಾದೆ ಎಂದು ಆರೋಪ ಮಾಡಿದರು.

ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಚುನಾವಣೆಗೆ ಹೋಗಲು ನಿರ್ಧರಿಸಿದ್ದರು. ಅಂತಹ ಸಂದರ್ಭದಲ್ಲಿ ಬಿಜೆಪಿ ನಾಯಕರೇ ತಮ್ಮನ್ನು ಸಂಪರ್ಕಿಸಿ ಚುನಾವಣೆಗೆ ಹೋಗುವುದು ಬೇಡ.

ಪರ್ಯಾಯ ವ್ಯವಸ್ಥೆಗೆ ತೀರ್ಮಾನ ಮಾಡಿ ಎಂದಾಗ ಅನಿವಾರ್ಯವಾಗಿ ಬಿಜೆಪಿ ಜತೆ ನಮ್ಮ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿಲುವಿಗೆ ವಿರುದ್ಧವಾಗಿ ನಮ್ಮ ಪಕ್ಷದ ಶಾಸಕರಿಗಾಗಿ ಹಾಗೂ ಪಕ್ಷಕ್ಕಾಗಿ ಬಿಜೆಪಿ ಜತೆ ಕೈ ಜೋಡಿಸಬೇಕಾಯಿತು. ಈ ವಿಚಾರದಲ್ಲಿ ಅಸತ್ಯ ನುಡಿಯುವುದಿಲ್ಲ ಎಂದು ಹೇಳಿದರು.

# ಅಧಿಕಾರ ಹಸ್ತಾಂತರಕ್ಕೆ ನನ್ನಿಂದ ಚ್ಯುತಿಯಾಗಿಲ್ಲ:
ಬಿಜೆಪಿಯೊಂದಿಗಿನ 20 ತಿಂಗಳ ಆಡಳಿತದ ನಂತರ ಬಿಜೆಪಿಗೆ ಹಸ್ತಾಂತರ ವಿಚಾರದಲ್ಲಿ ನನ್ನಿಂದ ಚ್ಯುತಿಯಾಗಲಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಅಂದು ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಸಿದ್ದನಿದ್ದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಸರ್ಕಾರದ ಅವಧಿ 18,17,16 ತಿಂಗಳು ಎಂದು ವರದಿ ಪ್ರಕಟವಾಗುತ್ತಿದ್ದವು.

ಪ್ರಾಮಾಣಿಕವಾಗಿ ಅಧಿಕಾರ ಹಸ್ತಾಂತರ ಮಾಡುವ ಪ್ರಯತ್ನ ಮಾಡಿದೆ. ಆದರೆ, ಬಿಜೆಪಿಯ ಕೇಂದ್ರ ನಾಯಕರು ಹಾಗೂ ನಮ್ಮ ನಾಯಕರು ಚರ್ಚೆ ಮಾಡಿದ ನಂತರ ಆ ಸರ್ಕಾರ ಹೋಯಿತು ಎಂದರು.

ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿನ ಭಿನ್ನಮತಕ್ಕೆ ಕಾಂಗ್ರೆಸ್ ನಾಯಕರ್ಯಾರೂ ಕಾರಣರಲ್ಲ. ಆಗ ಸಚಿವರಾಗಿದ್ದ ಪಕ್ಷೇತರ ಶಾಸಕರು, ಆ ಪಕ್ಷದವರೇ ಬಂಡಾಯ ವೆದ್ದಿದ್ದರು. ಅವರಿಗೆ ನನ್ನಿಂದ ಪ್ರೋತ್ಸಾಹ ದೊರೆತಿರಲಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಪ್ರತಿಪಕ್ಷದ ಜೆಡಿಎಸ್-ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಿ ಪಕ್ಷಾಂತರ ಮಾಡುವ ಕೆಲಸವಾಯಿತು.

ಆಗ ಯಾರೂ ಆಡಳಿತ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸುವ ಪ್ರಯತ್ನ ನಡೆದಿರಲಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆ ಕಾನೂನನ್ನು ತಿರುಚಬಹುದೆಂಬ ವಾತಾವರಣ ಹಾಗೂ ರಾಜಕೀಯದ ಹೊಸ ಅಧ್ಯಾಯ ಆಗ ಪ್ರಾರಂಭವಾಯಿತು ಎಂದು ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಲವು ಘಟನೆಗಳನ್ನು ಸಿಎಂ ಮೆಲುಕು ಹಾಕಿದರು.

ವಿರೋಧ ಪಕ್ಷದ ನಾಯಕರು ಶಾಂತಿಪ್ರಿಯರಾಗಿದ್ದಾರೆ ಎಂದು ನಗುನಗುತ್ತಲೇ ಯಡಿಯೂರಪ್ಪ ಅವರನ್ನು ಛೇಡಿಸಿದರು. ತಮ್ಮ 12 ವರ್ಷದ ರಾಜಕೀಯ ಜೀವನದಲ್ಲಿ ಹಲವು ಸರಿ-ತಪ್ಪುಗಳು ಆಗಿರಬಹುದು. ಅದು ನನ್ನ ಹಣೆಬರಹ.

ಆದರೆ, ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ರಾಜಕೀಯ ಘಟಾನಾವಳಿಗಳು ಪ್ರಜಾಪ್ರಭುತ್ವದ ವ್ಯವಸ್ಥೆಯ ಅಣಕವಾಗಿದೆ. ಇದರ ಜವಾಬ್ದಾರಿ ಅರಿತು ಸರಿ ಪಡಿಸಬೇಕು. ಇಂತಹ ಘಟನೆಗಳು ಸಂಶೋಧಕರಿಗೆ, ಇತಿಹಾಸಕಾರರಿಗೆ ದಾಖಲೆಯಾಗಲಿವೆ ಎಂದು ಹೇಳಿದರು.

Facebook Comments

Sri Raghav

Admin