ಯಡಿಯೂರಪ್ಪನವರ 10 ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಜೂ. 24 : ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಮುಂದಿಟ್ಟಿದ್ದ 10 ಪ್ರಶ್ನೆಗಳಿಗೆ ಸಿಎಂ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ. ಸಿಎಂ ನೀಡಿದ ಸ್ಪಷ್ಟಿಕರಣ ಈ ಕೀಳಕಂಡಂತಿದೆ ನೋಡಿ .

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಇಂದು (24-6-2019) ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ಆರೋಗ್ಯಕರವಾಗಿರುವುದಿಲ್ಲ. ಅದರಲ್ಲೂ ಸರ್ಕಾರೇತರ ವೈಯಕ್ತಿಕ ವಿಷಯಗಳ ಬಗ್ಗೆ ಮಾಡಿರುವ ಪ್ರಸ್ತಾಪಗಳು ಕೀಳು ಅಭಿರುಚಿಯಿಂದ ಕೂಡಿವೆ. ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಅವರು ಪ್ರಸ್ತಾಪಿಸಿರುವ ವಿಷಯಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳಿಗೆ ಮಾಧ್ಯಮಗಳ ಮೂಲಕ ಸ್ಪಷ್ಟೀಕರಿಸಲು ಇಚ್ಛಿಸುತ್ತೇನೆ.

# ಬರ ಪರಿಸ್ಥಿತಿ:
ರಾಜ್ಯವು ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, ರಾಜ್ಯದ ಜನತೆಗೆ ಅಗತ್ಯವಾದ ಪರಿಹಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ರಾಜ್ಯ ಇಡೀ ಆಡಳಿತ ಯಂತ್ರ ಸನ್ನದ್ಧವಾಗಿದೆ. ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ಬರ ನಿರ್ವಹಣೆಯಲ್ಲಿ ಪ್ರತಿ ದಿನ ಪರಿಶೀಲನೆ ನಡೆಸುತ್ತಿದ್ದು, ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪರಿಹಾರ ಕಾರ್ಯಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ.

ವಿಕೋಪ ನಿರ್ವಹಣೆಗಾಗಿ ಎಲ್ಲ ಜಿಲ್ಲಾಧಿಕಾರಿಗಳ ಬಳಿ ಒಟ್ಟು 620 ಕೋಟಿ ರೂ. ಲಭ್ಯವಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯು 201.5 ಕೋಟಿ ರೂ. ಹಾಗೂ ನಗರಾಭಿವೃದ್ಧಿ ಇಲಾಖೆಯು 50 ಕೋಟಿ ರೂ. ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ, ಕುಡಿಯುವ ನೀರು, ಮೇವು, ಉದ್ಯೋಗ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮುಖ್ಯ ಕಾರ್ಯದರ್ಶಿಗಳು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡಿ ಜಿಲ್ಲೆಗಳ ಬರ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿ, ಮಾರ್ಗದರ್ಶನ ನೀಡುತ್ತಿದ್ದಾರೆ.

ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದಲ್ಲಿ ಗುರಿ ಮೀರಿದ ಸಾಧನೆ ಮಾಡಿ, ಜನರಿಗೆ ಉದ್ಯೋಗ ಒದಗಿಸಲಾಗಿದೆ. ಕೇಂದ್ರದಿಂದ ಕೂಲಿ ಬಾಬ್ತು ಅನುದಾನ ಬಿಡುಗಡೆಯಾಗದಿದ್ದರೂ, ರಾಜ್ಯ ಸರ್ಕಾರವೇ ಮುಂಗಡ ಅನುದಾನ ನೀಡಿ, ಕೂಲಿ ಮೊತ್ತ ಜನರಿಗೆ ಪಾವತಿಸಿದೆ.

ಕೇಂದ್ರದಿಂದ 1500 ಕೋಟಿ ರೂ. ಮೊತ್ತ ಬಾಕಿ ಇದ್ದು, ಪ್ರಧಾನಮಂತ್ರಿಗಳು, ಹಣಕಾಸು ಸಚಿವರನ್ನು ಹಲವು ಬಾರಿ ಭೇಟಿಯಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ, ಈ ವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಮಾನ್ಯ ಯಡಿಯೂರಪ್ಪನವರು ವಾಸ್ತವತೆಯ ಅರಿವಿಲ್ಲದೆ, ಆಧಾರರಹಿತ ಆರೋಪ ಮಾಡುವ ಬದಲು ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸಿಕೊಟ್ಟಲ್ಲಿ, ಬರ ಪರಿಹಾರ ಕಾರ್ಯ ನಿರ್ವಹಿಸಲು ಮತ್ತಷ್ಟು ಅನುಕೂಲವಾಗುವುದು.

# ರೈತರ ಸಾಲ ಮನ್ನಾ :
ರೈತರ ಬೆಳೆ ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಲಾಗಿದೆ. ಸರ್ಕಾರ ನಿಗದಿ ಪಡಿಸಿದ ಮಾರ್ಗಸೂಚಿಗಳನ್ವಯ ಎಲ್ಲ ಅರ್ಹ ರೈತರಿಗೆ ಸಾಲ ಮನ್ನಾ ಸೌಲಭ್ಯ ಒದಗಿಸಲಾಗಿದೆ. ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸಲು ಉದ್ದೇಶಿಸಿದ್ದ ಈ ಯೋಜನೆಯನ್ನು ಆರ್ಥಿಕ ಶಿಸ್ತಿನ ಇತಿಮಿತಿಯೊಳಗೆ ಒಂದೇ ವರ್ಷದೊಳಗೆ ಪೂರ್ಣಗೊಳಿಸಲಾಗುತ್ತಿದೆ.

ಆರಂಭದಲ್ಲಿ ಬ್ಯಾಂಕುಗಳು ನೀಡಿದ ಮಾಹಿತಿಯನ್ವಯ ಸಾಲ ಮನ್ನಾ ಮೊತ್ತ 48,000 ಕೋಟಿ ರೂ. ಗಳಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸರ್ಕಾರದ ಮಾರ್ಗಸೂಚಿಯ ವ್ಯಾಪ್ತಿಯಲ್ಲಿ ಬರುವ ರೈತರ ಸಂಖ್ಯೆ 30 ಲಕ್ಷ ಹಾಗೂ ಬೆಳೆ ಸಾಲ ಮನ್ನಾ ಮೊತ್ತ ಅಂದಾಜು 16,000 ಕೋಟಿ ರೂ. ಗಳೆಂದು ಗುರುತಿಸಲಾಗಿದೆ.

ಇದರಲ್ಲಿ ಈಗಾಗಲೇ 23 ಲಕ್ಷ ರೈತರು ದಾಖಲೆಗಳನ್ನು ಒದಗಿಸಿದ್ದು, 12830 ಕೋಟಿ ರೂ. ಸಾಲ ಮನ್ನಾ ಮೊತ್ತವನ್ನು ನೇರವಾಗಿ ರೈತರ ಸಾಲ ಖಾತೆಗೆ ಬಿಡುಗಡೆ ಮಾಡಲಾಗುತ್ತಿದೆ. ಇದೇ ಜುಲೈ ಅಂತ್ಯದೊಳಗೆ ಸಾಲ ಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರವೂ ಯಾರಾದರೂ ಅರ್ಹ ರೈತರು ಮನವಿ ಸಲ್ಲಿಸಿದಲ್ಲಿ ಸಾಲ ಮನ್ನಾ ಮಾಡಲು ಸರ್ಕಾರ ಸಿದ್ಧವಿದೆ.

ಸಾಲ ಮನ್ನಾ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ಸಿಗುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಬ್ಯಾಂಕರುಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾಲ ಮನ್ನಾ ತೆರೆದ ಪುಸ್ತಕವಿದ್ದಂತೆ. ಮಾನ್ಯ ಯಡಿಯೂರಪ್ಪನವರೂ ಸಹ ಎಲ್ಲ ಮಾಹಿತಿಯನ್ನು ಛಿಟತಿs.ಞಚಿಡಿಟಿಚಿಣಚಿಞಚಿ.gov.iಟಿ ವೆಬ್ ಸೈಟಿನಲ್ಲಿ ಪಡೆದುಕೊಳ್ಳಬಹುದು.

ಸಾಲ ಮನ್ನಾ ಯೋಜನೆಯ ಕುರಿತು ಪ್ರತಿಪಕ್ಷದ ನಾಯಕರು ಬಾಯಿ ಚಪಲಕ್ಕೆ ಉದ್ಘರಿಸುವ ಮಾತುಗಳಿಂದ ಅವರು ರೈತರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ; ಇಲ್ಲದ ಗೊಂದಲ ಸೃಷ್ಟಿಸಲೂ ಸಾಧ್ಯವಿಲ್ಲ. ಸಾಲ ಮನ್ನಾ ಸೌಲಭ್ಯ ಎಲ್ಲ ಅರ್ಹ ರೈತರಿಗೂ ಒದಗಿಸುವುದನ್ನು ನಮ್ಮ ಸರ್ಕಾರ ಖಾತರಿ ಪಡಿಸಿದೆ.

# ರೈತರ ಆತ್ಮಹತ್ಯೆ :
ಕಳೆದ ಒಂದು ವರ್ಷದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಶೇ. 30 ರಷ್ಟು ಕಡಿಮೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಮಾನ್ಯ ವಿರೋಧ ಪಕ್ಷದ ನಾಯಕರೂ ಗಮನಿಸಿರಬಹುದೆಂದು ಭಾವಿಸುತ್ತೇನೆ. ಆದರೆ ಇದನ್ನು ಸಾಧನೆ ಎಂದು ಹೇಳಿಕೊಳ್ಳಲಾಗದು. ರೈತರ ಆತ್ಮಹತ್ಯೆ ಪ್ರಕರಣ ಶೂನ್ಯವಾಗಬೇಕು ಎನ್ನುವುದು ನಮ್ಮ ಆಶಯ. ಇದನ್ನು ಸಾಕಾರಗೊಳಿಸುವ ದೃಢ ಸಂಕಲ್ಪದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ವಿಚಾರದಲ್ಲಿ ರಾಜಕೀಯ ಮಾಡದೆ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಮಾತನಾಡಬೇಕೆ ಹೊರತು, ರೈತರ ಸ್ಥೈರ್ಯವನ್ನು ಕುಗ್ಗಿಸುವ ಯಾವ ಪ್ರಯತ್ನವೂ ಆರೋಗ್ಯಕರವಲ್ಲ.

# ಐಎಂಎ ಹಗರಣ :
ಐಎಂಎ ಹಗರಣ ಕುರಿತು ಸರ್ಕಾರ ಕಣ್ಣುಮುಚ್ಚಿ ಕುಳಿತಿಲ್ಲ. ಎಸ್ಐಟಿ ರಚಿಸಿ, ತನಿಖೆ ನಡೆಸಲಾಗುತ್ತಿದೆ. ಮಾನ್ಯ ಯಡಿಯೂರಪ್ಪನವರ ಬಳಿ ಸರ್ಕಾರದ ಸಚಿವರು, ಶಾಸಕರು ಮತ್ತಿತರರು ಈ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಸೂಕ್ತ ದಾಖಲೆಗಳಿದ್ದರೆ, ಎಸ್ಐಟಿಗೆ ನೀಡಲಿ. ಪ್ರಕರಣವು ತನಿಖಾ ಹಂತದಲ್ಲಿ ಇರುವಾಗ ದಾಖಲೆಗಳಿಲ್ಲದೆ, ರಾಜಕೀಯ ನಾಯಕರ ಹೆಸರನ್ನು ಪ್ರಸ್ತಾಪಿಸಿ, ತನಿಖೆಯ ಹಾದಿ ತಪ್ಪಿಸುವುದು ಸೂಕ್ತವಲ್ಲ.

# ಶಿಕ್ಷಣದ ಅಭಿವೃದ್ಧಿ :
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಪಣ ತೊಟ್ಟಿದೆ. 1200 ಕೋಟಿ ರೂ. ಗಳಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಪಡಿಸಲಾಗುತ್ತಿದೆ. ಮೊದಲ ಬಾರಿಗೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ, ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆಯಂತಹ ವಿನೂತನ ಉಪಕ್ರಮಗಳನ್ನು ಕೈಗೊಂಡಿದ್ದೇವೆ.

ಇದಕ್ಕೆ ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಕಕಾಲಕ್ಕೆ ನಾಲ್ಕರಿಂದ 10 ನೇ ತರಗತಿ ವರೆಗಿನ 40 ಲಕ್ಷ ಮಕ್ಕಳ ಕಲಿಕಾ ಸಾಮರ್ಥ್ಯ ಪರೀಕ್ಷೆ ನಡೆಸಿ, ಅದರ ಆಧಾರದಲ್ಲಿ ಕಲಿಕೆಯ ಸುಧಾರಣೆಗೆ ಕ್ರಮ ವಹಿಸುತ್ತಿದ್ದೇವೆ. ಶಿಕ್ಷಕರಿಗೆ ತರಬೇತಿ ನೀಡಲು ಆದ್ಯತೆ ನೀಡಿದ್ದೇವೆ. ಮಲೆನಾಡು, ಕರಾವಳಿ ಭಾಗಗಳಲ್ಲಿ ಶಿಥಿಲಗೊಂಡಿರುವ ಕಾಲು ಸೇತುವೆಗಳನ್ನು ಗುರುತಿಸಿ ಕಾಂಕ್ರೀಟ್ ಸೇತುವೆಗಳನ್ನು ನಿರ್ಮಿಸುವ ಶಾಲಾ ಸಂಪರ್ಕ ಸೇತು ಯೋಜನೆ ಜಾರಿಗೊಳಿಸಿದ್ದೇವೆ.

ಮಲೆನಾಡು ಭಾಗದಿಂದ ಬಂದ ಯಡಿಯೂರಪ್ಪನವರು ಈ ಯೋಜನೆಯನ್ನು ಮೆಚ್ಚುವರೆಂದು ನಂಬಿದ್ದೇನೆ. ಒಟ್ಟಾರೆಯಾಗಿ, ಸರ್ಕಾರಿ ಶಾಲೆಗಳಲ್ಲಿಯೂ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಒದಗಿಸುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಯಾವುದೇ ಸರ್ಕಾರಿ ಶಾಲೆ ಶೂನ್ಯ ಫಲಿತಾಂಶ ದಾಖಲಿಸಿಲ್ಲ ಎಂಬ ಅಂಶವನ್ನು ಸನ್ಮಾನ್ಯ ಯಡಿಯೂರಪ್ಪನವರು ಗಮನಿಸಿದ್ದಾರೆಂದುಕೊಂಡಿದ್ದೇನೆ.

# ಜಿಂದಾಲ್ ಸಂಸ್ಥೆ :
ಜಿಂದಾಲ್ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆದವರು ಯಾರು ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಈ ಸಂಸ್ಥೆಗೆ ಭೂಮಿ ನೀಡುವ ಕುರಿತು ಸಚಿವ ಸಂಪುಟದ ಉಪ ಸಮಿತಿ ನಿರ್ಧಾರ ಕೈಗೊಳ್ಳಲಿದೆ.

# ಗ್ರಾಮ ವಾಸ್ತವ್ಯ :
ಹಿಂದೆ ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಗಳ ಅಭಿವೃದ್ಧಿ ಕುರಿತು ಸನ್ಮಾನ್ಯ ಯಡಿಯೂರಪ್ಪನವರು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದ್ದಾರೆ. ನಾನು ಇದಕ್ಕೆ ಮುಂಚಿತವಾಗಿಯೇ ಈ ಗ್ರಾಮಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ. ನಾನು ಅಧಿಕಾರದಲ್ಲಿದ್ದ 20 ತಿಂಗಳ ಅವಧಿಯಲ್ಲಿ 47 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದೇನೆ. ಈ ಗ್ರಾಮಗಳಲ್ಲಿ ಮಾಡಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನೂ ಲಗತ್ತಿಸಿದ್ದೇನೆ.

ನನ್ನ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಕೇವಲ ಆ ಗ್ರಾಮದ ಅಭಿವೃದ್ಧಿ ಮಾತ್ರವಲ್ಲ. ಸ್ಥಳೀಯವಾಗಿ ಜನರ ವೈಯಕ್ತಿಕ ಸಮಸ್ಯೆಗಳಿಗೂ, ಸ್ಥಳದಲ್ಲಿಯೇ ಪರಿಹಾರ ದೊರಕಿಸುವುದು, ಜನರ ಆಶಯಗಳನ್ನು ಅರ್ಥೈಸಿಕೊಂಡು ಯೋಜನೆಗಳನ್ನು ರೂಪಿಸುವುದು, ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರಕಿಸಲು ಇರುವ ತೊಡಕುಗಳನ್ನು ನಿವಾರಿಸುವುದು ಗ್ರಾಮ ವಾಸ್ತವ್ಯದಿಂದ ಸಾಧ್ಯ.

ರೈತರ ಸಾಲ ಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಸುವರ್ಣ ಗ್ರಾಮ ಯೋಜನೆ, ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳ ಸ್ಥಾಪನೆ, 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕ ಮೊದಲಾದ ಉಪಕ್ರಮಗಳಿಗೆ ಪ್ರೇರಣೆ ನನ್ನ ಗ್ರಾಮ ವಾಸ್ತವ್ಯದ ಅನುಭವಗಳು. ನಾನು ತಂಗಿದ ಗ್ರಾಮಗಳಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಸಾಧ್ಯವಾಗಿದೆ. ಆದರೆ ನಂತರದ ದಿನಗಳಲ್ಲಿ ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಆದಾಗ ಈ ಗ್ರಾಮಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆಂಬ ಮಾಹಿತಿ ನೀಡಲಿ.

ಗ್ರಾಮ ವಾಸ್ತವ್ಯ ವ್ಯರ್ಥ, ಅದಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಪ್ರಯಾಣ ವೆಚ್ಚ, ಶಾಲೆಯಲ್ಲಿ ಉಳಿದುಕೊಳ್ಳಲು ಕನಿಷ್ಠ ಸೌಲಭ್ಯ ಮಾತ್ರ ನನ್ನ ವೆಚ್ಚ. ಇದೇ ಸಂದರ್ಭ ಬಳಸಿ, ವಿವಿಧ ಇಲಾಖೆಗಳು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ/ ಉದ್ಘಾಟನೆ ಮಾಡಿದ್ದಲ್ಲಿ, ಅವುಗಳು ಗ್ರಾಮ ವಾಸ್ತವ್ಯದ ವೆಚ್ಚದ ವ್ಯಾಪ್ತಿಗೆ ಬರುವುದಿಲ್ಲ.

ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ 58 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಆದರೆ ವಾಸ್ತವತೆಯನ್ನು ತಿಳಿದುಕೊಂಡು ಜವಾಬ್ದಾರಿಯುತ ಸ್ಥಾನದಲ್ಲಿರುವ ಶ್ರೀ ಯಡಿಯೂರಪ್ಪನವರು ಮಾತನಾಡಬೇಕೆಂದು ನಾನು ಆಶಿಸುತ್ತೇನೆ.

ಗ್ರಾಮ ವಾಸ್ತವ್ಯ ಪ್ರಚಾರದ ಗಿಮಿಕ್ ಅಲ್ಲ. ಅಂತಃಕರಣ, ಮಾನವೀಯತೆ, ತಾಯಿ ಹೃದಯದಿಂದ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಗ್ರಾಮ ವಾಸ್ತವ್ಯ ಸಾಧ್ಯ.

ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಶ್ರೀರಾಮಪುರ ಗ್ರಾಮದಲ್ಲಿ ನಸುಕಿನ ಜಾವದ ವರೆಗೆ ನನ್ನೊಂದಿಗೆ ಗ್ರಾಮ ವಾಸ್ತವ್ಯ ಮಾಡಿದ್ದ ಯಡಿಯೂರಪ್ಪನವರಿಗೆ ಅಂದು ಸಿಹಿಯಾಗಿದ್ದು, ಇಂದು ಕಹಿಯಾಗಿರುವುದು ಏಕೆ?

ಆಡಳಿತಾತ್ಮಕ ವಿಚಾರಗಳಿಗೆ ರಚನಾತ್ಮಕವಾಗಿ ಟೀಕೆ ಮಾಡಿದಲ್ಲಿ, ನಾನು ಅವುಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುತ್ತೇನೆ. ಆದರೆ ಸರ್ಕಾರದ ವ್ಯಾಪ್ತಿಗೆ ಬಾರದ ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಪದೇ ಪದೇ ಮಾತನಾಡಿ, ವಿರೋಧ ಪಕ್ಷದ ನಾಯಕರ ಸ್ಥಾನದ ಘನತೆಗೆ ಕುಂದು ತರಬಾರದೆಂದು ಮಾಧ್ಯಮಗಳ ಮೂಲಕ ಸನ್ಮಾನ್ಯ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ.

Facebook Comments

Sri Raghav

Admin