ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡಲ್ಲ : ಕುಪೇಂದ್ರರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ತೊರೆಯುವ ಉದ್ದೇಶವಿಲ್ಲ ಹಾಗೂ ಆಮಿಷಗಳಿಗೆ ಯಾವತ್ತೂ ಒಳಗಾಗುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಭಯವಿಲ್ಲ ಎಂದರು.

ಪಕ್ಷ ತ್ಯಜಿಸುವಂತಹ ವಾತಾವರಣವಿಲ್ಲ. ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ಈಗಾಗಲೇ ಬಂದಿದ್ದೇನೆ. ಮತ್ತೆ ಇನ್ನೊಂದು ಪಕ್ಷಕ್ಕೆ ಹೋಗುವ ಉದ್ದೇಶವಿಲ್ಲ. ಪಕ್ಷ ಬಿಡುತ್ತಾರೆ ಎಂಬ ಮಾಧ್ಯಮಗಳ ವರದಿ ಊಹಾಪೋಹದಿಂದ ಕೂಡಿದೆ. ಅದರಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಸಿ.ರಾಮಮೂರ್ತಿ ಅವರು ನಮ್ಮ ಸಂಬಂಧಿಕರು, ಅಲ್ಲದೆ, ಸಂಸತ್‍ನಲ್ಲಿ ಅಕ್ಕ-ಪಕ್ಕ ಕೂರುತ್ತಿದ್ದೆವು.

ಇತರೆ ಪಕ್ಷದ ಯಾವ ನಾಯಕರೂ ನಮ್ಮನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಿಸಿದ ನಾಯಕರ ಹೆಸರು ಗೊತ್ತಿದ್ದರೆ ಹೇಳಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಒಡನಾಟದಲ್ಲಿದ್ದು, ಮುಂದೆಯೂ ಇರುತ್ತೇನೆ. ಪಕ್ಷ ತ್ಯಜಿಸುವ ಯಾವ ಉದ್ದೇಶವು ಇಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ರಾಷ್ಟ್ರೀಯ ವಕ್ತಾರ ರಮೇಶ್‍ಬಾಬು ಮಾತನಾಡಿ, ಕುಪೇಂದ್ರರೆಡ್ಡಿ ಅವರು ಪಕ್ಷದ ಆಧಾರ ಸ್ತಂಭವಾಗಿದ್ದು, ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಪಕ್ಷದ ಪರವಾಗಿ ಕೆಲಸ ಮಾಡಲಿದ್ದಾರೆ ಎಂದರು.

ಮಾಜಿ ಸಚಿವ ಬಿ.ಸತ್ಯನಾರಾಯಣ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದ ಬಗ್ಗೆ ಅಸಮಾಧಾನವಿಲ್ಲ. ಅವರೂ ಕೂಡ ಪಕ್ಷ ಸಂಘಟನೆಗೆ ಕೆಲಸ ಮಾಡುತ್ತಿದ್ದಾರೆ. ವಿಧಾನಪರಿಷತ್ ಸದಸ್ಯರು ಅಸಮಾಧಾನಗೊಂಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಚಿವ ಬಸವರಾಜಹೊರಟ್ಟಿ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರೂ ಕೂಡ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದರು.

Facebook Comments