ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಒತ್ತಾಯ : 11ರಂದು ಹೋರಾಟದ ರೂಪುರೇಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.6- ಕುರುಬ ಸಮುದಾಯವನ್ನು ಎಸ್‍ಟಿ ಮೀಸಲಾತಿಗೆ ಸೇರಿಸಲು ಹೋರಾಟ ಮಾಡುವ ರೂಪುರೇಷೆ ನಿರ್ಧರಿಸಲು ಅ.11ರಂದು ಜನಪ್ರತಿನಿಗಳ ಸಭೆ ಕರೆಯಲಾಗಿದೆ ಎಂದು ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಯಿಂದ ಶಾಸಕ , ಸಂಸದರವರೆಗೆ ಎಲ್ಲಾ ಚುನಾಯಿತ ಪ್ರತಿನಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸಬೇಕೆಂಬ ಉದ್ದೇಶದಿಂದ ಹೋರಾಟ ಮಾಡಲಾಗುತ್ತಿದೆ. ಇದಕ್ಕಾಗಿ ಕುರುಬ ಎಸ್‍ಟಿ ಹೋರಾಟ ಸಮಿತಿ ರಚಿಸಲಾಗಿದೆ. ಬೀದರ್, ಯಾದಗಿರಿ, ಕಲ್ಬುರ್ಗಿ ಜಿಲ್ಲೆಗಳಿಂದ ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.

ಕೊಡಗುಕುರುಬರ ಬೇಡಿಕೆ ವಾಪಾಸ್ಸಾಗಿದೆ. ಎಲ್ಲವನ್ನೂ ಒಟ್ಟಾಗಿ ಸೇರಿಸಿ ರಾಜ್ಯಾದ್ಯಂತ ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸಬೇಕೆಂದು ಹೋರಾಟ ನಡೆಸಲಾಗುತ್ತಿದೆ ಎಂದರು.

ಎಸ್‍ಟಿಯಲ್ಲಿ ಮೀಸಲಾತಿ ಪಡೆದವರು ಮೀಸಲಾತಿ ಪ್ರಮಾಣವನ್ನು ಶೇ.3ರಿಂದ 7.5ಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಹಿಂದುಳಿದ ವರ್ಗದಲ್ಲಿರುವ ಮೀಸಲಾತಿಯೊಂದಿಗೆ ಎಸ್‍ಟಿ ಸಮುದಾಯಕ್ಕೆ ಸೇರ್ಪಡೆ ಹೊಂದಬೇಕು ಇದರಿಂದ ವಾಲ್ಮೀಕಿ ಮತ್ತಿತರ ಸಮುದಾಯಕ್ಕೆ ತೊಂದರೆಯಾಗದು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲೇ ಹೋರಾಟ ನಡೆಯುತ್ತಿದ್ದು, ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕುರುಬ ಸಮಾಜವನ್ನು ಎಸ್‍ಟಿಗೆ ಸೇರ್ಪಡೆಯಾಗಬೇಕೆಂಬ ಹೋರಾಟ ಮಾಡುವ ರೂಪುರೇಷೆ ನಿರ್ಧರಿಸಲು ಅ.11ರಂದು ಅರಮನೆ ಮೈದಾನದಲ್ಲಿ ಚುನಾಯಿತ ಪ್ರತಿನಿಗಳ ಸಭೆ ಕರೆದಿದ್ದೇವೆ. ಅಲ್ಲಿ ರೂಪುರೇಷೆ ನಿರ್ಧರಿಸಲಾಗುವುದು.

ಈಗಾಗಲೇ ಸವಿತಾ ಸಮಾಜ, ಕಾಡುಗೊಲ್ಲರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅವರಿಗೂ ಸಹಕಾರ ಕೊಡುತ್ತೇವೆ. ಶ್ರೀಗಳ ಆದೇಶ ಪಾಲಿಸಿ ಹೋರಾಟವನ್ನು ಆದಷ್ಟು ಶೀಘ್ರ ಕೇಂದ್ರ ಸರ್ಕಾರದವರೆಗೂ ಕೊಂಡೊಯ್ಯುತ್ತೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಮಟ್ಟದಲ್ಲಿ ಎಲ್ಲರೂ ಶ್ರಮ ಹಾಕಲಿದ್ದೇವೆ ಎಂದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಕುರುಬರನ್ನು ಎಸ್‍ಟಿಗೆ ಸೇರಿಸಬೇಕೆಂಬುದು ಹೊಸ ಬೇಡಿಕೆಯಲ್ಲ. ನಮಗೆ ಸಿಗಬೇಕಾದ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಹೋರಾಟದಲ್ಲಿ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಹಿಂದ ಹಾಗೂ ಕುರುಬ ಎಸ್‍ಟಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ ಮಾತನಾಡಿ, 1976ರಲ್ಲಿ ಕುರುಬ ಸಮಾಜಕ್ಕೆ ಅನ್ಯಾಯವಾಗಿದೆ. ದಾಖಲೆಗಳೆಲ್ಲ ಕುರುಬರ ಕಡೆಗಿದೆ. ಐದು ಆಯೋಗಗಳಲ್ಲಿ ಕುರುಬರು ಹಿಂದುಳಿದ ಜನಾಂಗ ಎಂದು ದಾಖಲಾಗಿದೆ.

ನಮ್ಮ ಜನಾಂಗದ ನಾಲ್ವರು ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ. ಹಿಂದುಳಿದ ವರ್ಗದ 2(ಎ)ಗೆ ಸೇರ್ಪಡೆಯಾಗಬೇಕೆಂಬ ಉದ್ದೇಶ 1868ರಲ್ಲಿಯೇ ಬ್ರಿಟಿಷ್ ಸರ್ಕಾರ ಅತ್ಯಂತ ಮೂಲ ನಿವಾಸಿ ಬುಡಕಟ್ಟು ಜನಾಂಗವೆಂದು ಕರೆದಿದೆ.

1901ರಲ್ಲಿ ಮದ್ರಾಸ್ ಸರ್ಕಾರ ಕುರುಬ, ಕುರುಬನ್ ಎಂಬುದು ದಕ್ಷಿಣ ಭಾರತದ ಬುಡುಕಟ್ಟು ಜನಾಂಗವೆಂದು ಘೋಷಿಸಿದೆ. 1976ರವರಗೆ ಭಾರತ ಸರ್ಕಾರದ ಆದೇಶದಲ್ಲಿ ಕುರುಬ ಜನಾಂಗದ ಎಲ್ಲ ಉಪಪಂಗಡಗಳು ಸೇರ್ಪಡೆಯಾಗಿವೆ. ಜೇನು ಕುರುಬ, ಕಾಡುಕುರುಬ, ಕುರುಬನ್, ಕುರುಬ ಬಿಟ್ಟುಹೋಗಿದೆ.

ಈ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ಹೋರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಶ್ರೀ ಈಶ್ವರನಾಂದಪುರಿ ಮಹಾಸ್ವಾಮೀಜಿ, ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ, ಕುರುಬ ಎಸ್‍ಟಿ ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಸಂಸದ ವಿರೂಪಾಕ್ಷಪ್ಪ, ನಿವೃತ್ತ ಐಎಎಸ್ ಅಕಾರಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.

Facebook Comments

Sri Raghav

Admin