ರಾಜಧಾನಿ ತಲುಪಿದ ಕುರುಬರ ಎಸ್‍ಟಿ ಮೀಸಲಾತಿ ಆರಂಭವಾದ ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.3- ಐತಿಹಾಸಿಕ ಕುರುಬರ ಎಸ್‍ಟಿ ಹೋರಾಟ ಪಾದಯಾತ್ರೆ ಇಂದು ರಾಜಧಾನಿ ಬೆಂಗಳೂರು ತಲುಪಿತು. ಕುರುಬ ಜನಾಂಗವನ್ನು ಎಸ್‍ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಕಾಗಿನೆಲೆ ಕನಕಗುರು ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರುವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಇಂದು ಮಾದನಾಯಕನಹಳ್ಳಿಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬೆಳಗ್ಗೆ 10.30ಕ್ಕೆ ಮಹಾಲಕ್ಷ್ಮಿ ಲೇಔಟ್‍ಗೆ ಬಂದು ತಲುಪಿತು.

ಜನವರಿ 15ರಿಂದ ಕಾಗಿನೆಲೆಯಿಂದ ಹೊರಟ ಪಾದಯಾತ್ರೆ ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ತುಮಕೂರು ಮೂಲಕ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ಗೆ ತಲುಪಿದೆ. ಇಂದು ಸಂಜೆ ಖೊಡೇಸ್ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಆಗಮಿಸಿ ಅಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಲಿರುವ ನಿರಂಜನಾನಂದಪುರಿ ಶ್ರೀಗಳು ಅಲ್ಲಿಂದ ಫ್ರೀಡಂಪಾರ್ಕ್‍ಗೆ ತೆರಳಿ ಧರ್ಮಸಭೆ ನಡೆಸಲಿದ್ದಾರೆ. ಅಲ್ಲಿಗೆ ಪಾದಯಾತ್ರೆ ಸಮಾಪ್ತಿಗೊಳ್ಳಲಿದ್ದು, ಸಂಜೆ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.

20 ದಿನಗಳ ಕಾಲ 360ಕಿ.ಮೀ. ಸುದೀರ್ಘ ಪಾದಯಾತ್ರೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದು, 7ರಂದು ಬಿಐಇಸಿ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ. ಅಂದು ಸರ್ಕಾರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಮಾತನಾಡಿದ ನಿರಂಜನಾನಂದಪುರಿ ಶ್ರೀಗಳು, ಕುರುಬ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಎಸ್‍ಟಿಗೆ ಸೇರಿಸುವ ಮೂಲಕ ಸರ್ಕಾರಿ ಸೌಲಭ್ಯಗಳಿಗಾಗಿ ಆಗ್ರಹಿಸಿದ್ದೇವೆ. ಸಮುದಾಯ ಎಂದೋ ಎಸ್‍ಟಿಗೆ ಸೇರಬೇಕಿತ್ತು. ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ವಂಚಿತವಾಗಿದೆ.

ಈಗ ಸಮುದಾಯವನ್ನು ಎಸ್‍ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಸುದೀರ್ಘ ಪಾದಯಾತ್ರೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ. ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಸಮುದಾಯವನ್ನು ಎಸ್‍ಟಿ ಪಂಗಡಕ್ಕೆ ಸೇರಿಸಿ ಅನುಕೂಲ ಕಲ್ಪಿಸಬೇಕೆಂಬುದು ನಮ್ಮ ಆಗ್ರಹವಾಗಿದೆ.

ಪಾದಯಾತ್ರೆ ಯಶಸ್ವಿಯಾಗಿದೆ. ಎಲ್ಲರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಸರ್ಕಾರವೂ ಕೂಡ ಸ್ಪಂದಿಸಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ನಮಗೆ ನಂಬಿಕೆ ಇದೆ. ನಮ್ಮ ಸಮುದಾಯವನ್ನು ಎಸ್‍ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ಅವರು ಶಿಫಾರಸು ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಶ್ರೀಗಳು ತಿಳಿಸಿದರು.

Facebook Comments