ನಮ್ಮ ಸಮುದಾಯದ ಶಾಸಕರನ್ನು ಕಡೆಗಣಿಸಿದರೆ ಉಗ್ರ ಹೋರಾಟ : ಕುರುಬರ ಸಂಘ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27- ಸರ್ಕಾರ ರಚನೆ ಸಂದರ್ಭದಲ್ಲಿ ನಮ್ಮ ಸಮುದಾಯದ ಶಾಸಕರನ್ನು ಕಡೆಗಣಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಎಚ್ಚರಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಡಿ.ವೆಂಕಟೇಶ್ ಮೂರ್ತಿ ಅವರು ಸಚಿವರಾಗಿದ್ದ ಈಶ್ವರಪ್ಪ ಅವರು ಯಡಿಯೂರಪ್ಪ ಅವರ ಸಮಕಾಲೀನರು. ಬಿಜೆಪಿ ಹಿರಿಯ ಮುಖಂಡರು. ಹಿಂದುಳಿದ ಹಾಗೂ ದಲಿತರ ಪರವಾಗಿ ಹೋರಾಟ ಮಾಡಿದವರು. ಅವರಿಗೆ ಸಂಪುಟದಲ್ಲಿ ಸೂಕ್ತ ಸ್ಥಾನ ಕಲ್ಪಿಸಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಬೈರತಿ ಬಸವರಾಜ, ಎಂ.ಟಿ.ಬಿ.ನಾಗರಾಜ್, ಶಂಕರ್ ಅವರ ಕೊಡುಗೆ ಅಪಾರವಾಗಿದೆ. ಎಚ್.ವಿಶ್ವನಾಥ್ ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಯಲ್ಲಿ ಕೈ ಜೋಡಿಸಿದ್ದರು. ಇವರೆಲ್ಲರಿಗೂ ಸೂಕ್ತ ಸ್ಥಾನ ಕಲ್ಪಿಸಬೇಕೆಂದು ವೆಂಕಟೇಶ್ ಮೂರ್ತಿ ಆಗ್ರಹಿಸಿದರು.

ನಮ್ಮ ಸಮುದಾಯದ ನಾಯಕರನ್ನು ಕೈಬಿಟ್ಟರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಕುರುಬರು ಶೇ.32ರಷ್ಟಿದ್ದಾರೆ. ಅತಿ ದೊಡ್ಡ ಸಮುದಾಯ ನಮ್ಮದಾಗಿದೆ. ನಮ್ಮ ಸಮುದಾಯದ ಶಾಸಕರಿಗೆ ಸಂಪುಟದಲ್ಲಿ ಹೆಚ್ಚಿನ ಸ್ಥಾನ ನೀಡಬೇಕು ಎಂದು ಅವರು ಹೇಳಿದರು.

ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿದಾಗ ಲಿಂಗಾಯಿತರಾದ ಜಗದೀಶ್ ಶೆಟ್ಟರ್ ಅವರಿಗೆ ಸ್ಥಾನ ಕಲ್ಪಿಸಲಾಯಿತು. ನಂತರ ಸದಾನಂದಗೌಡರಿಗೆ ಅವಕಾಶ ನೀಡಲಾಯಿತು. ನಂತರದ ಸ್ಥಾನದಲ್ಲಿದ್ದ ಹಿಂದುಳಿದ ವರ್ಗದವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ವೆಂಕಟೇಶ್ ಮೂರ್ತಿ ಒತ್ತಾಯಿಸಿದರು.
ಸಂಘದ ಖಜಾಂಚಿ ದೇವರಾಜ್, ಸಂಘಟನಾ ಕಾರ್ಯದರ್ಶಿ ಹೊಸಳ್ಳಿ, ಮಾಜಿ ಕಾರ್ಯಾಧ್ಯಕ್ಷ ಲಿಂಗಪ್ಪ, ಪ್ರಸನ್ನ ಪ್ರಹ್ಲಾದ್ ಮುಂತಾದವರು ಈ ಸಂದರ್ಭದಲ್ಲಿದ್ದರು.

Facebook Comments