ಬಹು ನಿರೀಕ್ಷಿತ ‘ಕುರುಕ್ಷೇತ್ರ’ ದರ್ಶನಕ್ಕೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

ಇಡೀ ಕನ್ನಡ ಚಿತ್ರರಂಗವೇ ಕಾಯುತ್ತಿರುವಂತಹ ಬಹು ನಿರೀಕ್ಷೆಯ ಅದ್ಧೂರಿ ವೆಚ್ಚದ ದೊಡ್ಡ ತಾರಾಬಳಗವನ್ನೇ ಹೊಂದಿರುವಂತಹ ಚಿತ್ರ. ಮುನಿರತ್ನ ಕುರುಕ್ಷೇತ್ರ ಇದೇ ವಾರ ರಾಜ್ಯ ಹಾಗೂ ದೇಶದ ನಾನಾಭಾಗಗಳು ಸೇರಿದಂತೆ ಸುಮಾರು 3 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಈ ವಾರ ಹೊರಬರುತ್ತಿದ್ದು, ಮುಂದಿನ ದಿನಗಳಲ್ಲಿ ತಮಿಳು, ಮಲೆಯಾಳಿ ಹಾಗೂ ಹಿಂದಿ ಭಾಷೆಗಳಲ್ಲಿ ಮುನಿರತ್ನ ಕುರುಕ್ಷೇತ್ರ ಅಬ್ಬರಿಸಲಿದೆ. 2ಡಿ ಹಾಗೂ 3ಡಿಯಲ್ಲಿ ಬಿಡುಗಡೆಗೊಳ್ಳುತ್ತಿರುವ ಮುನಿರತ್ನ ಕುರುಕ್ಷೇತ್ರ ಚಿತ್ರವನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿದ್ದು, ಈಗಾಗಲೇ ಮುಂಗಡ ಟಿಕೆಟ್ ಪಡೆದು ಕಾಯುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೆ ಚಿತ್ರ ಈ ಮುನಿರತ್ನ ಕುರುಕ್ಷೇತ್ರ. ಸಾಮಾನ್ಯವಾಗಿ ಆ್ಯಕ್ಷನ್, ಲವ್ ಚಿತ್ರಗಳನ್ನು ಮಾಡುವುದು ಸರ್ವೆ ಸಾಮಾನ್ಯ. ಆದರೆ, ಮಹಾಭಾರತ ಕುರುಕ್ಷೇತ್ರದ ಒಂದು ಪ್ರಮುಖ ಘಟ್ಟವಾಗಿ ದುರ್ಯೋಧನನ ದೃಷ್ಟಿಕೋನದೊಂದಿಗೆ ಚಿತ್ರೀಕರಣಗೊಂಡಿರುವಂತಹ ಮುನಿರತ್ನ ಕುರುಕ್ಷೇತ್ರ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ನಿರ್ಮಾಪಕ ಮುನಿರತ್ನ ಮಾತನಾಡಿ ಬೇರೆ ಚಿತ್ರಗಳಿಗಿಂತ ಈ ಸಿನಿಮಾದಲ್ಲಿ ನಟಿಸುವಾಗ ಬಹಳ ಶ್ರಮ ಇರುತ್ತದೆ. ಮಾಮೂಲಿ ಚಿತ್ರವೇ ಬೇರೆ ಇರುತ್ತೆ. ಇದರಲ್ಲಿ ನಡಿಗೆ, ಮಾತನಾಡುವ ಪದದಿಂದ ಹಿಡಿದು ಹಾವ-ಭಾವ ಎಲ್ಲಾ ಬೇರೆ ಇರುತ್ತದೆ. ಅಲ್ಲದೆ, 3ಡಿಗೆ ಒಂದೇ ಸೀನನ್ನು ಎರಡು ಬಾರಿ ಮಾಡಬೇಕಿರುತ್ತದೆ.

ಇದರಲ್ಲಿ ದರ್ಶನ್ ಅವರು ಹೆಚ್ಚು ಶ್ರಮ ಪಟ್ಟಿದ್ದಾರೆ. ಅಂಬರೀಶ್ ಇಲ್ಲದೆ ಅವರ ಕೊನೇ ಸಿನಿಮಾದ ಬಗ್ಗೆ ಮಾತನಾಡಲು ನನಗೆ ತುಂಬಾ ಬೇಸರವಾಗುತ್ತದೆ. ಇಡೀ ಮಹಾಭಾರತದಲ್ಲಿ ಬಹುಮುಖ್ಯ ಪಾತ್ರವದು. ಭೀಷ್ಮ ಎಂಬ ಆ ಅದ್ಭುತ ಪಾತ್ರಕ್ಕೆ ಜೀವ ತುಂಬಿದ ಅವರು ಅಭಿನಯಿಸಿದ್ದಾರೆ. ಆ ಸಮಯದಲ್ಲಿ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಆದರೂ ಕೂಡ ಅದನ್ನು ಎಲ್ಲೂ ತೋರಿಸಿಕೊಳ್ಳದೆ ಭೀಷ್ಮನ ಪಾತ್ರಕ್ಕೆ ಕಳೆ ನೀಡಿದ್ದಾರೆ. ಅವರೊಬ್ಬ ಮಹಾನ್ ನಟ.

ದರ್ಶನ್ ಇಲ್ಲದೆ ಕುರುಕ್ಷೇತ್ರ ಇಲ್ಲ, ಕೃಷ್ಣ ಇಲ್ಲದೆ ಮಹಾಭಾರತ ಇಲ್ಲ. ಕೃಷ್ಣನ ಪಾತ್ರಕ್ಕೆ ರವಿಚಂದ್ರನ್ ಹೆಸರ ಹೇಳಿದಾಗ ಎಲ್ಲರೂ ನಕ್ಕರು. ನೀವೆಲ್ಲ ನಕ್ಕಿದ್ದಕ್ಕಾಗಿಯೇ ಆ ಪಾತ್ರಕ್ಕೆ ರವಿಚಂದ್ರನ್ ಸೂಕ್ತ ಎಂದೆ. ಸಿನಿಮಾ ರೆಡಿಯಾದ ಮೇಲೆ ನೋಡಿದಾಗ ನನ್ನ ಆಯ್ಕೆ ಸೂಕ್ತವಾಗಿದೆ ಎನಿಸಿತು. ಮಹಾಭಾರತದ ಕಥೆಯಲ್ಲಿ ಕುರುಕ್ಷೇತ್ರ ಭಾಗವನ್ನು ಆಯ್ಕೆ ಮಾಡಿಕೊಂಡಾಗ ಅಲ್ಲಿ ಅಭಿಮನ್ಯು ಎಂಬ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಜವಾಬ್ದಾರಿಯನ್ನು ನಿಖಿಲ್‍ಕುಮಾರ್ ನ್ಯಾಯ ಒದಗಿಸಿದ್ದಾರೆ.

ಇನ್ನು ನಟ ಶಶಿಕುಮಾರ್ ಧರ್ಮರಾಯನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸೆಟ್‍ನಲ್ಲಿ ಅವರು ನಿಜವಾದ ಧರ್ಮರಾಯನೇ ಆಗಿದ್ದರು. ಭೀಮನ ಪಾತ್ರಕ್ಕೆ ಅಂತ 3-4 ಜನರನ್ನು ಕರೆತಂದಿದ್ದೆವು. ಅದರಲ್ಲಿ ದುರ್ಯೋಧನನ ಪಾತ್ರಕ್ಕೆ ದರ್ಶನ್ ಅವರ ಬಾಡಿ, ಹೈಟ್‍ಗೆ ಎದುರಾಗಿ ನಿಲ್ಲಿಸಲು ಸೋನುಸೂದ್ ಅವರೇ ಸೂಕ್ತ ಎನಿಸಿತು. ಹಾಗಾಗಿ ಸೋನು ಸೂದ್ ಅವರನ್ನು ಭೀಮನ ಪಾತ್ರಕ್ಕೆ ಸೆಲೆಕ್ಟ್ ಮಾಡಿದೆವು.

ಇನ್ನು ಉತ್ತರ ಭಾರತ, ದಕ್ಷಿಣ ಭಾರತ ಎರಡೂ ಕಡೆ ಸಲ್ಲಬೇಕು ಎಂದು ಪಾಂಡವರ ಪತ್ನಿ ದ್ರೌಪದಿಯ ಪಾತ್ರವನ್ನು ನಟಿ ಸ್ನೇಹ ಅವರಿಗೆ ನೀಡಿದೆವು. ಮುಖ್ಯವಾಗಿ ದುರ್ಯೋಧನನ ಪತ್ನಿ ಭಾನುಮತಿಯ ಪಾತ್ರಕ್ಕೆ ನಮ್ಮ ಕನ್ನಡದವರೇ ಆಗಿರಬೇಕು ಎಂದು ನಟಿ ಮೇಘನಾ ರಾಜ್ ಅವರನ್ನು ಕರೆತಂದೆವು.

ನಮ್ಮ ಮೂವರು ಮೊಮ್ಮಕ್ಕಳು ಕೂಡ ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ. ಕನ್ನಡಕ್ಕೆ ಇಂಥ ಒಂದು ಅದ್ಭುತ ಚಿತ್ರವನ್ನು ಮಾಡಿದ ಹೆಮ್ಮೆ ನನಗಿದೆ. ಇಂಥ ಸಿನಿಮಾ ಮಾಡಿರುವುದು ನನ್ನ ಪೂರ್ವಜನ್ಮದ ಪುಣ್ಯ. ಈ ಜನ್ಮಕ್ಕೆ ಇಷ್ಟು ಸಾಕು ಎನಿಸಿದೆ ಎಂದು ನಿರ್ಮಾಪಕ ಮುನಿರತ್ನ ತಮ್ಮ ಹೆಮ್ಮೆಯ ಕುರುಕ್ಷೇತ್ರ ಚಿತ್ರದ ಬಗ್ಗೆ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತುಂಬಾ ಭಾವುಕತೆಯಿಂದಲೇ ಹೇಳಿಕೊಂಡರು. ಅವರ ಮಾತು ಕೇಳಿ ಇಡೀ ಸಭಾಂಗಣ ಒಂದು ಕ್ಷಣ ಸ್ಥಬ್ದವಾಯಿತು.

ಚಿತ್ರದ ಕೇಂದ್ರಬಿಂದು ದುರ್ಯೋಧನನ ಪಾತ್ರಧಾರಿ ನಟ ದರ್ಶನ್ ಮಾತನಾಡುತ್ತ ಇಂದಿಗೆ ಎರಡು ವರ್ಷಗಳ ಹಿಂದೆ ಚಿತ್ರ ಆರಂಭವಾಗಿತ್ತು. ಈಗ ತೆರೆಮೇಲೆ ರಿಲೀಸ್ ಆಗುತ್ತಿದೆ. ನಿರ್ಮಾಪಕರು ಇಂಥ ಒಂದು ಸಿನಿಮಾನ ಮಾಡುತ್ತೇನೆ ಎಂದು ಮುಂದೆ ಬಂದದ್ದೇ ಖುಷಿಯ ವಿಚಾರ. ಈ ಚಿತ್ರಕ್ಕೆ ನಿಜವಾದ ಹೀರೋ ಎಂದರೆ ಮುನಿರತ್ನ ಅವರೇ. ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಇಂಟರೆಸ್ಟ್ ತೆಗೆದುಕೊಂಡು ಸೂಕ್ತ ಎನಿಸಿದವರನ್ನು ಅವರೇ ಆಯ್ಕೆ ಮಾಡಿದ್ದಾರೆ.

ಈಗಿನ ಜನರೇಷನ್‍ಗೆ ಭೀಮ ದುರ್ಯೋಧನನ ಬಗ್ಗೆ ಅಷ್ಟಾಗಿ ಬಗ್ಗೆ ಗೊತ್ತಿಲ್ಲ. ಅದನ್ನು ಇವತ್ತಿನ ಜನರಿಗೆ ತಕ್ಕಹಾಗೆ ನಿರ್ದೇಶಕರು ತೆರೆಯ ಮೇಲೆ ತಂದಿದ್ದಾರೆ, ಇನ್ನು 3ಡಿಯಲ್ಲಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು. ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕುರುಕ್ಷೇತ್ರ ಚಿತ್ರದಲ್ಲಿ ಚಿತ್ರರಂಗದ ಹಿರಿಯ ಕಲಾವಿದರಾದ ರೆಬಲ್ ಸ್ಟಾರ್ ಅಂಬರೀಶ್, ಅರ್ಜುನ್ ಸಜರ್, ಶಶಿಕುಮಾರ್, ರವಿಶಂಕರ್, ಸೋನು ಸೂದ್, ಮೇಘನಾ ರಾಜï, ಸ್ನೇಹಾ, ಹರಿಪ್ರಿಯಾ ಸೇರಿದಂತೆ ಅನೇಕ ಹಿರಿಯ ಹಾಗೂ ಕಿರಿಯ ಕಲಾವಿದರ ಬಳಗವೇ ಕಾಣಿಸಿಕೊಂಡಿದೆ. ಇನ್ನು ನಾಗಣ್ಣ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ನಿರ್ಮಾಪಕ ಮುನಿರತ್ನ ಅವರು ಬಂಡವಾಳ ಹೂಡಿದ್ದು, ವಿ.ಹರಿಕೃಷ್ಣನ್ ಸಂಗೀತ ಒದಗಿಸಿದ್ದಾರೆ. ಜಯನ್ ವಿನ್ಸೆಂಟ್ ಅವರ ಛಾಯಾಗ್ರಹಣದ ಈ ಚಿತ್ರಕ್ಕೆ ಜೋನಿ ಹರ್ಷ ಸಂಕಲನ ಮಾಡಿದ್ದಾರೆ.

ಬಹಳಷ್ಟು ಕುತೂಹಲ ಹುಟ್ಟುಹಾಕಿರುವ ಮುನಿರತ್ನ ಕುರುಕ್ಷೇತ್ರ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ಅದ್ಧೂರಿಯಾಗಿ ವಿತರಣೆ ಮಾಡುತ್ತಿದ್ದು, ಪ್ರತಿಯೊಬ್ಬ ಸಿನಿ ಪ್ರಿಯರೂ ಈ ಚಿತ್ರ ವೀಕ್ಷಿಸಲು ಅನುಕೂಲ ಮಾಡಿಕೊಡಲು ನಿರ್ಧರಿಸಿದ್ದಾರಂತೆ.
ಚಿತ್ರರಂಗದಲ್ಲೇ ದೊಡ್ಡ ಮಟ್ಟದ ದಾಖಲೆ ಮಾಡಲು ಸಿದ್ಧವಾಗಿರುವ ಈ ಚಿತ್ರ 2ಡಿ ಹಾಗೂ 3ಡಿ ಮೂಲಕ ಬೆಳ್ಳಿ ಪರದೆಯನ್ನು ಅಲಂಕರಿಸಲಿದೆ.

Facebook Comments