ಕುಸುಮಾರನ್ನು ಗೆಲ್ಲಿಸಲು ಡಿಕೆಶಿ ಕೊನೆ ಕ್ಷಣದ ಕಸರತ್ತು, ಅಬ್ಬರದ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.1-ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಕಾಂಗ್ರೆಸ್ ಪಡೆ ಇಂದು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆ ಬರೇಕಾ, ಅತುಮನೇಸಾರ್ ಚರ್ಚ್‍ಗೆ ಭೇಟಿ ನೀಡಿದರು. ನಂತರ ಯಶವಂತಪುರದ ಜುಮ್ಮಾ ಮಸೀದಿಗೂ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಬಾರದು ಎಂಬ ಅರಿವು ನಮಗೂ ಇದೆ. ಹಾಗಾಗಿ ಚರ್ಚ್ ಮತ್ತು ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದು ಬಂದಿದ್ದೇನೆ ಎಂದರು. ನಂತರ ಯಶವಂತಪುರ, ಅಂಬೇಡ್ಕರ್ ನಗರ, ಬಿ.ಕೆ.ನಗರ, ಪಂಪಾ ನಗರ ಮತ್ತಿತರ ಭಾಗದಲ್ಲಿ ರೋಡ್ ಶೋ ನಡೆಸಿ ಭರ್ಜರಿ ಪ್ರಚಾರ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ವಿಧ ವಿಧವಾದ ತಂತ್ರಗಾರಿಕೆಗಳನ್ನು ಬಳಸುತ್ತಿರುವ ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸರ್ವ ಧರ್ಮ ಸಮನ್ವಯದ ವಿಭಿನ್ನ ಸಂದೇಶ ರವಾನೆ ಮಾಡಿದ್ದಾರೆ.  ಗಾರ್ಮೆಂಟ್ಸ್‍ಗಳಿಗೂ ತೆರಳಿ ಅಲ್ಲಿನ ಕಾರ್ಮಿಕರನ್ನು ಭೇಟಿ ಮಾಡಿ ಮತ ಯಾಚನೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಡಿ.ಕೆ.ಶಿವಕುಮಾರ್ ಜತೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

ಕುಸುಮಾ ಹೋದ ಕಡೆಯಲ್ಲೆಲ್ಲಾ ನಿಮ್ಮ ಮನೆ ಮಗಳೆಂದು ಭಾವಿಸಿ ನಿಮ್ಮೆಲ್ಲಾ ಕಷ್ಟಗಳಿಗೆ ಜತೆಯಾಗಿರುತ್ತೇನೆ. ಕಾಂಗ್ರೆಸ್‍ಗೆ ಮತ ಹಾಕಿ. ನಿಮ್ಮ ಮತ ವ್ಯರ್ಥವಾಗದಂತೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡುವ ಮೂಲಕ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಒಗ್ಗಟ್ಟಿನಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಸುಮಾರು 500ಕ್ಕೂ ಹೆಚ್ಚು ಮಂದಿ ಪ್ರಮುಖ ನಾಯಕರುಗಳು ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ಜವಾಬ್ದಾರಿ ಹಂಚಿಕೊಂಡು ಹಗಲು-ರಾತ್ರಿ ಬೆವರಿಳಿಸಿ ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಕೆಲವು ಕಡೆ ಬಹಿರಂಗ ಪ್ರಚಾರಕ್ಕೆ ಅಡ್ಡಿಪಡಿಸಿದಾಗ್ಯೂ ಹಿಂದೇಟು ಹಾಕದೆ ಕಾಂಗ್ರೆಸ್ ದಿಟ್ಟತನದಿಂದ ಪ್ರಚಾರ ಮಾಡಿರುವುದು ಮತದಾರರ ವಿಶ್ವಾಸವನ್ನು ಹೆಚ್ಚಿಸಿದೆ. ಸಂಸದ ಡಿ.ಕೆ.ಸುರೇಶ್ ಅವರು, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಾ ಭೈರೇಗೌಡ, ವಿಧಾನ ಪರಿಷತ್ ಸದಸ್ಯರಾದ ನಾರಾಯಣಸ್ವಾಮಿ ಸೇರಿದಂತೆ ಅನೇಕ ನಾಯಕರು ಹಗಲು-ರಾತ್ರಿ ಟೊಂಕ ಕಟ್ಟಿ ನಿಂತು ಕಾಂಗ್ರೆಸ್ ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ.

ಕಳೆದ 20 ದಿನಗಳಿಂದ ನಡೆದಿರುವ ಬಿರುಸಿನ ಪ್ರಚಾರದಲ್ಲಿ ಕಾಂಗ್ರೆಸ್ ಪರವಾದ ಅಲೆ ಸೃಷ್ಟಿಯಾಗಿದೆ. ಕುಸುಮಾ ಅವರು ಜನಸಾಮನ್ಯರ ಜತೆ ಬೆರೆಯುತ್ತಿರುವ ರೀತಿ ಜನರ ಮನಸ್ಸು ಗೆದ್ದಿದೆ.  ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಜನಸಾಮಾನ್ಯರ ನಡುವೆ ತೆರಳುತ್ತಿರುವ ಕುಸುಮಾ ಅವರು ಮನೆ ಮನೆಗೆ ಭೇಟಿ ಕೊಟ್ಟು ಮತ ಯಾಚನೆ ಮಾಡುತ್ತಿದ್ದಾರೆ.

ರಾಜಕಾರಣದ ಬಗ್ಗೆ ನಕಾರಾತ್ಮಕ ಅಂಶಗಳನ್ನು ಎಲ್ಲೂ ಮಾತನಾಡದೆ ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡುತ್ತಿರುವ ಕುಸುಮಾ ಅವರು ಮುಂದಿನ ದಿನಗಳಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸುತ್ತೇನೆ. ಮಹಿಳೆಯರ ಕಷ್ಟಕ್ಕೆ ಮಾದರಿಯಾಗಿ ನಿಲ್ಲುತ್ತೇನೆ. ಗಾರ್ಮೆಂಟ್ಸ್ ನೌಕರರು , ದೀನ ದಲಿತರು, ಅಲ್ಪಸಂಖ್ಯಾತರು, ಅಶಕ್ತ ವರ್ಗದ ಜತೆಯಾಗಿ ನಿಲ್ಲುವುದಾಗಿ ಕುಸುಮಾ ಹೇಳುತ್ತಿದ್ದಾರೆ.

ಕ್ಷೇತ್ರದಲ್ಲಿ ಯುವ ಸಮುದಾಯವೇ ಕುಸುಮಾ ಅವರ ಬೆನ್ನಿಗೆ ನಿಂತು ಪ್ರಚಾರದ ಅಂಗಳಕ್ಕೆ ನಿಂತಿದೆ. ಹೋದ ಕಡೆಯಲ್ಲೆಲ್ಲಾ ಜನಸಾಗರವೇ ಕಂಡು ಬರುತ್ತಿದೆ. ಅದರಲ್ಲೂ ಮಹಿಳೆಯರು, ಹಿರಿಯರು, ಕುಸುಮಾ ಅವರನ್ನು ಬರಮಾಡಿಕೊಳ್ಳುತ್ತಿರುವ ರೀತಿ ಆಪ್ತವಾಗಿ ಕಾಣಿಸುತ್ತಿದೆ.

ಕ್ಷೇತ್ರದಲ್ಲಿ ಈವರೆಗೂ ನಡೆದ ಚುನಾವಣೆಯ ರೀತಿಗಿಂತ ಭಿನ್ನವಾಗಿ ಉಪ ಚುನಾವಣೆಯ ಪ್ರಚಾರಗಳು ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಸಂಚಲನ ಮೂಡಿಸಿದ್ದಾರೆ. ಪಕ್ಷದ ಎಲ್ಲಾ ಹಿರಿಯ ನಾಯಕರು ಒಟ್ಟಾಗಿ ನಿಂತು ಕುಸುಮಾ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

ಇಂದು ಬಹಿರಂಗ ಪ್ರಚಾರ ಅಂತ್ಯ ಹಿನ್ನೆಲೆಯಲ್ಲಿ ಕೊನೆ ಕ್ಷಣದ ಮತ ಬೇಟೆ ಚುರುಕುಗೊಳಿಸಿರುವ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಡೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

Facebook Comments