“ಜನರ ಪ್ರೀತಿ ನನ್ನ ನೋವು ಮರೆಸಿದೆ” : ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.27- ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿರುವ ಭಾರೀ ಜನ ಬೆಂಬಲ ಮತ್ತು ಪ್ರೀತಿ ನನ್ನ ಜೀವನದಲ್ಲಾದ ವೈಯಕ್ತಿಕ ನೋವನ್ನು ಮರೆಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತ ರಾಯಪ್ಪ ಹೇಳಿದರು. ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕರ ಜೊತೆ ಭರ್ಜರಿ ಪ್ರಚಾರ ನಡೆಸಿದ ಅವರು, ಅಪಾರ ಪ್ರಮಾಣದ ಜನಸ್ತೋಮ ಕಂಡು ಭಾವೋದ್ವೇಗಕ್ಕೆ ಒಳಗಾದರು.

ನೀವೆಲ್ಲರೂ ತೋರಿಸುತ್ತಿರುವ ಪ್ರೀತಿ ನನ್ನ ಜೀವನದಲ್ಲಾದ ನೋವನ್ನು ಮರೆಸಿದೆ. ನಿಮ್ಮ ಮನೆ ಮಗಳಂತೆ ಇರುತ್ತೇನೆ. ನಿಮ್ಮ ಸೇವೆಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಜಾತಿ, ಧರ್ಮ ಬೇಧ ಮಾಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ನವೆಂಬರ್ 3ರಂದು ನಡೆಯುವ ಚುನಾವಣೆಯಲ್ಲಿ ನನ್ನ ಕ್ರಮ ಸಂಖ್ಯೆ ಒಂದರಲ್ಲಿರುವ ಹಸ್ತದ ಗುರುತಿಗೆ ಮತ ನೀಡಿ, ಭಾರೀ ಅಂತರದಿಂದ ಗೆಲ್ಲಿಸಿ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಜೆ.ಪಿ. ಪಾರ್ಕ್ ವಾರ್ಡ್‍ನ ಬೋವಿ ಕಾಲೋನಿ, ಮೋಹನ್‍ಕುಮಾರ್ ನಗರ, ಚೌಡೇಶ್ವರಿನಗರ ದೇವಸ್ಥಾನ, ಎಚ್.ಎಂ.ಟಿ.ಲೇಔಟ್, ಯಶವಂತಪುರ ವಾರ್ಡ್‍ನ ದೊಡ್ಡ ಮಸೀದಿ, ರೈಲ್ವೆ ಸ್ಟೇಷನ್ ಸರ್ಕಲ್, ಬಿ.ಕೆ.ನಗರ ಒಂದನೇ ಮುಖ್ಯರಸ್ತೆ, ರಘು ಮೆಡಿಕಲ್ ಸ್ಟೋರ್ಸ್, ಸಿಎಲ್‍ಆರ್ ಸ್ಕೂಲ್ ರಸ್ತೆ, ಪಂಪಾನಗರ ಪ್ರದೇಶಗಳಲ್ಲಿ ರೋಡ್ ಶೋನಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.

ರೋಡ್ ಶೋನಲ್ಲಿ ಪ್ರಮುಖವಾಗಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕುಸುಮಾ ಸುಸಂಸ್ಕøತ ಹೆಣ್ಣು ಮಗಳು, ಅವರ ತಂದೆ ಹನುಮಂತರಾಯಪ್ಪ ಈ ಭಾಗದಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ ಎಂದರು. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದರು. ಅದರಿಂದಾಗಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಸ್ಮರಿಸಿಕೊಂಡರು.

ಬಿಜೆಪಿ ಸರ್ಕಾರದಲ್ಲಿ ಈರುಳ್ಳಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನ ಜೀವನ ತತ್ತರಿಸುವಂತಾಗಿದೆ. ಜನ ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು. ಸಂಸದ ಡಿ.ಕೆ.ಸುರೇಶ್, ಶಾಸಕ ಭೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣ ಸ್ವಾಮಿ, ನಜೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ರಿಜ್ವಾನ್‍ಅರ್ಷದ್, ಮಾಜಿ ಶಾಸಕ ಆರ್.ವಿ.ದೇವರಾಜ್ ಮತ್ತಿತರರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಚಾರದುದ್ದಕ್ಕೂ ಜನಸಾಗರವೇ ಕಂಡು ಬಂದಿತು. ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ಬೆಂಬಲಿಸಿ ಜನಸ್ತೋಮ ಸೇರುತ್ತಿತ್ತು. ನಾವು ಕಳೆದ ಬಾರಿ ಮತ ಹಾಕಿ ಗೆಲ್ಲಿಸಿದ ಅಭ್ಯರ್ಥಿ ನಮಗೆ ಮೋಸ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಅವರು ಬಿಜೆಪಿಗೆ ಹೋಗುವಾಗ ನಮ್ಮನ್ನು ಕೇಳಲಿಲ್ಲ. ಈಗ ಬಂದು ಮತ್ತೆ ಗೆಲ್ಲಿಸಿ ಎಂದು ಕೇಳುತ್ತಿದ್ದಾರೆ. ಮೋಸ ಮಾಡಿ ಹೋದವರ ಮಾತಿಗೆ ಈ ಬಾರಿ ನಾವು ಮರಳಾಗುವುದಿಲ್ಲ ಎಂದು ರೋಡ್ ಶೋನಲ್ಲಿ ಮತದಾರರು ನಾಯಕರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಮುನಿರತ್ನ ನಾಯ್ಡು ಅವರು ತಮ್ಮ ಸ್ವಂತ ದುಡ್ಡಿನಿಂದ ಅಭಿವೃದ್ಧಿ ಮಾಡಿಲ್ಲ, ಸರ್ಕಾರದ ಅನುದಾನ ಪಡೆದು ಕೆಲಸ ಮಾಡಿದ್ದಾರೆ. ಅದರಲ್ಲೂ ಸರಿಯಾಗಿ ಅಭಿವೃದ್ಧಿ ಮಾಡಿಲ್ಲ. ಭಾರಿ ಭ್ರಷ್ಟಚಾರ ನಡೆಸಿದ್ದಾರೆ ಎಂದು ಜನ ಕಿಡಿಕಾರುತ್ತಿದ್ದರು.

Facebook Comments