ಚುಚ್ಚು ಮಾತುಗಳಿಂದ ಮಾನಸಿಕವಾಗಿ ನನ್ನನ್ನು ಕೊಲ್ಲುವ ಪ್ರಯತ್ನ ನಡೆದಿತ್ತು : ಕುಸುಮಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16- ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಬದುಕೇ ಮುಗಿದು ಹೋಯ್ತು ಎಂಬ ನೋವಿನಲ್ಲಿದ್ದಾಗ ಗಂಡನ ಸಾವಿಗೆ ನೀನೇ ಕಾರಣ ಎಂದು ದೂಷಣೆ ಮಾಡಿ ಈ ಸಮಾಜ ನನ್ನನ್ನು ಬಹುತೇಕ ಮಾನಸಿಕ ಕೊಲೆ ಮಾಡಿತ್ತು ಎಂದು ಐಎಎಸ್ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ವಿಷಾದಿಸಿದ್ದಾರೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಅವರು ಮಾಧ್ಯಮಗಳ ಜತೆ ಮನಬಿಚ್ಚಿ ಮಾತನಾಡಿದ್ದು, ನನ್ನ ತಂದೆ-ತಾಯಿ ನನಗೆ ಕಷ್ಟ ಎಂದರೆ ಏನು ಎಂಬುದನ್ನು ಗೊತ್ತಾಗದಂತೆ ಬೆಳೆಸಿದರು.

ಉನ್ನತಾಕಾಧಿರಿಯನ್ನು ಮದುವೆಯಾದರೆ ಸುಖವಾಗಿ ಇರಬಹುದು ಎಂದು ಹೇಳಿ ಡಿ.ಕೆ.ರವಿ ಅವರಿಗೆ ಕೊಟ್ಟು ಮದುವೆ ಮಾಡಿದರು. ಐದು ವರ್ಷದ ಸಾಂಸಾರಿಕ ಜೀವನ ನಡೆದಿತ್ತು. ಇದ್ದಕ್ಕಿದ್ದಂತೆ ರವಿ ಅವರು ಸಾವನ್ನಪ್ಪಿದರು. 26ನೇ ವಯಸ್ಸಿಗೆ ನಾನು ವೈದವ್ಯವನ್ನು ಅನುಭವಿಸಿದೆ.

ಪತಿಯನ್ನು ಕಳೆದುಕೊಂಡ ನೋವು, ಸಂಕಟದಲ್ಲಿ ಜೀವನವೇ ಮುಗಿದು ಹೊಯ್ತು ಎಂಬ ಹತಾಷ ಪರಿಸ್ಥಿತಿ ಒಂದು ಕಡೆ. ಮತ್ತೊಂದೆಡೆ ರವಿ ಸಾವಿಗೆ ನೀನೇ ಕಾರಣ ಎಂಬ ಚುಚ್ಚು ಮಾತುಗಳು ನನ್ನ ಜತೆಯಲ್ಲಿ ನಿಲ್ಲಬೇಕಾದ ಕುಟುಂಬದವರೇ ನನ್ನ ವಿರುದ್ಧ ನಿಂದನೆಯ ಮಾತುಗಳನ್ನಾಡಲಾರಂಭಿಸಿದರು.

ನೀನೇ ಮಾಡಿದ್ದು ಎಂಬ ಆರೋಪ ಕೇಳಿ ಬಂದಾಗ ನಾನು ಕುಸಿದು ಹೋದೆ. ಆ ನಿಂದನೆಯ ಮಾತುಗಳನ್ನು ಎದುರಿಸುವ ಧೈರ್ಯವಿಲ್ಲದೆ ಜೀವನವನ್ನೇ ಮುಗಿಸಿಕೊಳ್ಳುವ ಯೋಚನೆ ಮಾಡಿದೆ. ಆ ಸಂದರ್ಭದಲ್ಲಿ ನನ್ನ ಜತೆ ನಿಂತವರು ತಂದೆ-ತಾಯಿ. ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ನನ್ನನ್ನು ಬದುಕುವಂತೆ ಮಾಡಿದರು.

ಪತಿಯ ಸಾವಿಗೆ ನೀನೇ ಕಾರಣ ಎಂದು ದೂಷಿಸುವವರು ಅವರ ಮನೆಯ ಹೆಣ್ಣು ಮಕ್ಕಳಿಗೆ ನನ್ನದೇ ಪರಿಸ್ಥಿತಿ ಬಂದಿದ್ದರೆ ಇದೇ ರೀತಿಯ ಮಾತುಗಳನ್ನು ಹೇಳುತ್ತಿದ್ದರೆ ? ಸಮಾಜದಲ್ಲಿ ದೈಹಿಕ ಅತ್ಯಾಚಾರಗಳನ್ನು ಮಾತ್ರ ಕೇಳಿದ್ದೇವೆ.

ಮಾನಸಿಕ ಅತ್ಯಾಚಾರ, ಶೋಷಣೆಯನ್ನು ನಾನು ಅನುಭವಿಸಿದ್ದೇನೆ. ನೀನೇ ಅಪರಾ ಎಂದು ನನ್ನನ್ನು ಚಿತ್ರಹಿಂಸೆ ಮಾಡಿದರು. ಚಾರಿತ್ರ್ಯ ವಧೆ ಮಾಡಿದರು ಎಂದು ನೊಂದುಕೊಂಡರು.

ಕಷ್ಟದಲ್ಲಿ ನೊಂದವರಿಗೆ ಇನ್ನೊಬ್ಬರ ಕಷ್ಟ ಅರ್ಥವಾಗುತ್ತದೆ. ಹತಾಷ ಪರಿಸ್ಥಿತಿಯಲ್ಲಿ ವಿದ್ಯೆ ನನ್ನನ್ನು ಬದಲಾವಣೆ ಮಾಡಿತು. ಓದಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದೆ. ಜನರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದಿದ್ದಾರೆ.

ನೊಂದವರಿಗೆ ಧ್ವನಿಯಾಗುತ್ತೇನೆ. ನನ್ನಂತೆ ಸಂಕಷ್ಟ ಅನುಭವಿಸುವ ಹೆಣ್ಣುಮಕ್ಕಳಿಗೆ ಬೆಂಬಲವಾಗಿರುತ್ತೇನೆ. ಜನರ ಕಷ್ಟ ನನಗೆ ಗೊತ್ತಿದೆ. ಏಕೆಂದರೆ ನಾನೂ ಕೂಡ ಕಷ್ಟ ಅನುಭವಿಸಿಯೇ ಇಲ್ಲಿ ನಿಂತಿದ್ದೇನೆ ಎಂದು ಹೇಳಿದ್ದಾರೆ.

Facebook Comments

Sri Raghav

Admin