ಶೇ.80ರಷ್ಟು ಕಾರ್ಮಿಕರ ಕೊರತೆ, ಕೈಗಾರಿಕೆಗಳಿಗೆ ಕೊರೋನಾ ಪೆಟ್ಟು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಕೊರೊನಾದಿಂದಾಗಿ ಕೈಗಾರಿಕೆಗಳು ಬಹುತೇಕ ಮುಚ್ಚುವ ಹಂತಕ್ಕೆ ತಲುಪಿವೆ. ಇದರ ನಡುವೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಲ್ಲಿರುವ ಹೊರ ರಾಜ್ಯ ಉದ್ಯಮಿಗಳ ಮೇಲಿರುವ ಪ್ರೇಮದಿಂದಾಗಿ ಕರ್ನಾಟಕದಲ್ಲಿ ಅಳಿದುಳಿದಿರುವ ಕೈಗಾರಿಕೆಗಳು ಮಗುಚಿ ಬೀಳುವ ಸಾಧ್ಯತೆಗಳು ಎದುರಾಗಿದೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಸುಮಾರು 150 ದಿನ ಕೈಗಾರಿಕೆಗಳು ಬಾಗಿಲು ಹಾಕಿದ್ದವು. ಈಗ ಹಂತ ಹಂತವಾಗಿ ಜೀವ ಪಡೆಯುತ್ತಿವೆ. ಇಂಥ ಸಂದರ್ಭದಲ್ಲಿ ನೆರೆ ರಾಜ್ಯಗಳ ಉದ್ಯಮಿಗಳ ಹಾವಳಿ ಸ್ಥಳೀಯರನ್ನು ನಷ್ಟದೆಡೆಗೆ ದೂಡುತ್ತಿವೆ.

ಲಾಕ್‍ಡೌನ್ ವೇಳೆ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಲಾಗದೆ ನೆರೆರಾಜ್ಯಗಳಿಂದ ಬಂದಿದ್ದ ಕಾರ್ಮಿಕರು ಕರ್ನಾಟಕ ಬಿಟ್ಟು ತಮ್ಮ ತವರಿಗೆ ಮರಳಿದ್ದಾರೆ. ಹೀಗಾಗಿ ಶೇ.80ರಷ್ಟು ಕಾರ್ಮಿಕರ ಕೊರತೆ ಎದುರಾಗಿದೆ. ಕೈಗಾರಿಕೆಗಳು ಮತ್ತು ಉದ್ಯಮಗಳಿಗೆ ಕೌಶಲ್ಯ ಮತ್ತು ಕೌಶಲ್ಯರಹಿತ ಕಾರ್ಮಿಕರ ಕೊರತೆ ಉಂಟಾಗಿ ಪರದಾಡುವಂತಾಗಿದೆ.

ರಾಜ್ಯ ಬಿಟ್ಟು ಹೋಗಿರುವ ವಲಸಿಗರನ್ನು ವಾಪಸ್ ಕರೆತರುವುದು ದುಸ್ಸಾಹಸವೇ ಸರಿ. ರಾಜ್ಯಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ವಲಸಿಗರು ರಾಜ್ಯ ಬಿಟ್ಟು ಹೋಗುವಾಗಲೂ ತಡೆಯುವ ಪ್ರಯತ್ನ ಮಾಡಿಲ್ಲ. ಈಗ ಮಾನವ ಸಂಪನ್ಮೂಲ ಕೊರತೆ ಎದುರಾದಾಗಲೂ ಅದನ್ನು ನೀಗಿಸುವ ಪ್ರಯತ್ನ ಮಾಡುತ್ತಿಲ್ಲ.

# ಸ್ವಾರ್ಥಕ್ಕಾಗಿ ನೆರೆ ರಾಜ್ಯದವರಿಗೆ ಮಣೆ:
ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಹೊರ ರಾಜ್ಯದ ಉದ್ಯಮಿಗಳು ಮತ್ತು ಬಂಡವಾಳಶಾಹಿಗಳ ಮೇಲಿನ ಪ್ರೀತಿಯಿಂದಾಗಿ ರಾಜ್ಯದ ಕೈಗಾರಿಕೆಗಳು ಸೊರಗಿ ಹೋಗುತ್ತಿವೆ. ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಅಧಿಕಾರಸ್ಥ ಪ್ರಮುಖರಿಗೆ ಹೊರರಾಜ್ಯದ ಉದ್ಯಮಿಗಳ ಮೇಲೆ ಅತಿಯಾದ ವ್ಯಾಮೋಹವಿದೆ.

ಹೀಗಾಗಿ ಸರ್ಕಾರದಿಂದ ರೂಪಿಸಲಾಗುವ ಯೋಜನೆಗಳು ಮತ್ತು ಅದರ ಟೆಂಡರ್ ಷರತ್ತುಗಳಲ್ಲೇ ಹೊರರಾಜ್ಯದವರಿಗೆ ಅನುಕೂಲವಾಗುವಂತೆ ಪ್ರಾಥಮಿಕ ಹಂತದಲ್ಲೇ ನಿಯಮಗಳನ್ನು ರೂಪಿಸಲಾಗುತ್ತಿದೆ.
ಸ್ಥಳೀಯ ಉದ್ಯಮಿಗಳಿಗೆ ನಿಲುಕದಂತೆ ಟೆಂಡರ್ ಷರತ್ತುಗಳನ್ನು ಹಾಕಿ ಗುತ್ತಿಗೆ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ.

ಹೊರ ರಾಜ್ಯದಿಂದ ಬರುವ ಉದ್ಯಮಿಗಳು ಕರ್ನಾಟಕದ ಅಧಿಕಾರಿಗಳನ್ನು ಬಹಳ ಆತ್ಮೀಯವಾಗಿ ನೋಡಿಕೊಂಡು ಗುತ್ತಿಗೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಆತುರಾತುರವಾಗಿ ಕೆಲಸ ಮುಗಿಸಿ ಬಿಲ್ ಪಡೆದು ನಾಮಪತ್ತೆಯಾಗುತ್ತಿದ್ದಾರೆ.

ಹೊರರಾಜ್ಯದವರು ನಿರ್ವಹಿಸಿದ ಕಾಮಗಾರಿ ಮತ್ತು ಸೇವೆಯ ಗುಣಮಟ್ಟ ಕಳಪೆಯಾಗಿದೆ ಎಂದು ಹಲವಾರು ವರದಿಗಳು ದೃಢೀಕರಿಸಿವೆ. ಆದರೂ ಕರ್ನಾಟಕದಲ್ಲಿರುವ ಕನ್ನಡಯೇತರ ಐಎಎಸ್ ಅಧಿಕಾರಿಗಳಿಗೆ ನೆರೆ ರಾಜ್ಯದ ಗುತ್ತಿಗೆದಾರರ ಮೇಲೆಯೇ ಹೆಚ್ಚು ಪ್ರೀತಿ. ಹೀಗಾಗಿ ಟೆಂಡರ್ ಷರತ್ತುಗಳಲ್ಲೇ ಸ್ಥಳೀಯ ಗುತ್ತಿಗೆದಾರರನ್ನು ಅನರ್ಹರನ್ನಾಗಿ ಮಾಡಿಬಿಡುತ್ತಾರೆ.

ದೇಶದಲ್ಲೇ ಹೆಚ್ಚು ಆದಾಯ ತೆರಿಗೆ ಪಾವತಿಸುವ ಮೂರನೇ ರಾಜ್ಯವಾಗಿರುವ ಕರ್ನಾಟಕ ಜಿಎಸ್‍ಟಿ ಸಂಗ್ರಹದಲ್ಲೂ ದ್ವಿತೀಯ ಸ್ಥಾನದಲ್ಲಿತ್ತು. ಆದರೆ ಕೆಲವರ ಸ್ವಾರ್ಥದಿಂದಾಗಿ ರಾಜ್ಯದ ಉದ್ಯಮ ವಲಯ, ಕೈಗಾರಿಕಾ ವಲಯ ಸಂಪೂರ್ಣ ನೆಲಕಚ್ಚುತ್ತಿದೆ.

ಹೊರರಾಜ್ಯದವರು ಇಲ್ಲಿಗೆ ಬಂದು ಗುತ್ತಿಗೆ ಪಡೆದು, ಲಾಭ ಮಾಡಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಉದ್ಯಮಿಗಳು ಎಷ್ಟೇ ಬಾಯಿಬಡಿದುಕೊಂಡರೂ, ಕಾನೂನು ಹೋರಾಟ ಮಾಡಿದರೂ ನ್ಯಾಯ ಸಿಗುತ್ತಿಲ್ಲ.
ನವೆಂಬರ್‍ನಲ್ಲಷ್ಟೇ ಜಾಗೃತವಾಗುವ ಕನ್ನಡದ ಪ್ರೇಮ ಉಳಿದಂತೆ ಕಂಬಳಿ ಹೊದ್ದು ಮಲಗಿಬಿಡುತ್ತದೆ.

ರಾಜಕಾರಣಿಗಳು, ಕನ್ನಡ ಸಂಘಟನೆಗಳು, ಕೈಗಾರಿಕಾ ವಲಯದ ವಿವಿಧ ಸಂಘಟನೆಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿವೆ. ಸರ್ಕಾರದ ಅಧಿಕಾರಿಗಳ ಅನ್ಯಾಯಗಳು ಕಣ್ಣೆದುರಿಗೆ ನಡೆಯುತ್ತಿದ್ದರೂ ಸಚಿವರೆನಿಸಿಕೊಂಡ ಜನಪ್ರತಿನಿಧಿಗಳು ಸರಿಪಡಿಸುವ ಗೋಜಿಗೆ ಹೋಗುವುದಿಲ್ಲ.

ಹೊರರಾಜ್ಯದವರಿಗೆ ಮಣೆ ಹಾಕಿದರೆ ಸ್ಥಳೀಯರಿಗೆ ಉದ್ಯೋಗ ಸಿಗುವುದಿಲ್ಲ, ರಾಜ್ಯದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆ, ಸ್ಥಳೀಯ ಉದ್ಯಮಗಳು ಮುಚ್ಚಿಹೋದರೆ ಮುಂದಿನ ದಿನಗಳಲ್ಲಿ ಆರ್ಥಿಕ ಅರಾಜಕತೆ ಸೃಷ್ಟಿಯಾಗುತ್ತದೆ. ಈ ಎಲ್ಲ ಅಪಾಯಗಳು ಕಣ್ಣೆದುರೇ ಇದ್ದರೂ ಸ್ವಾರ್ಥಕ್ಕಾಗಿ ಕೆಲ ಅಧಿಕಾರಿಗಳು ರಾಜ್ಯದ ಸಂಪನ್ಮೂಲವನ್ನು ನೆರೆ ರಾಜ್ಯದವರಿಗೆ ದೋಚಲು ಅವಕಾಶ ಮಾಡಿಕೊಡುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ನೆರೆ ರಾಜ್ಯದ ಕಂಪನಿಗಳ ಅಡಿಯಲ್ಲಿ ಕನ್ನಡಿಗರು ಕೂಲಿ ಆಳುಗಳಾಗಿ ದುಡಿಯದೆ ಅನ್ಯ ಮಾರ್ಗವಿಲ್ಲದಂತಾಗುತ್ತದೆ. ಕಳೆದ ಬಾರಿಯ ಕೈಗಾರಿಕಾ ನೀತಿಯಲ್ಲಿ ಸ್ಥಳೀಯರಿಗೆ ಶೇ.15ರಷ್ಟು ಪ್ರಾತಿನಿಧ್ಯ ನೀಡಲಾಗಿತ್ತು.

ಹೊಸ ಕೈಗಾರಿಕಾ ನೀತಿಯಲ್ಲಿ ಸ್ಥಳೀಯ ಉದ್ಯಮಿಗಳಿಗೆ ಆದ್ಯತೆ ಸಿಗುತ್ತಿಲ್ಲ. ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸ್ಥಳೀಯ ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರವೇ ನೆರೆ ರಾಜ್ಯದವರ ಮೇಲಿನ ಪ್ರೇಮವನ್ನು ಹೆಚ್ಚಾಗಿ ತೋರಿಸಲಾಗುತ್ತಿದೆ.

ಕಾಸಿಯಾ, ಎಫ್‍ಕೆಸಿಸಿಯಂತಹ ಸಂಘಟನೆಗಳು ಕೇವಲ ಮನವಿ ಕೊಡುವುದಷ್ಟಕ್ಕೆ ಸೀಮಿತವಾಗದೇ ಬದ್ಧತೆಯ ಹೋರಾಟಕ್ಕಿಳಿಯುವ ಮೂಲಕ ಉದ್ಯಮಗಳನ್ನು ರಕ್ಷಿಸಬೇಕಾಗಿದೆ.

Facebook Comments

Sri Raghav

Admin