ಲಡಾಖ್ ಸಂಘರ್ಷ : ಮುಂದಿನ ವಾರ ಇಂಡೋ-ಚೀನಾ ನಡುವೆ ಮತ್ತೆ ಕಮಾಂಡರ್‌ಗಳ ಮಟ್ಟದ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.18-ಕುತಂತ್ರಿ ಚೀನಾದ ದುರ್ಬದ್ಧಿಯಿಂದ ಪೂರ್ವ ಲಡಾಖ್‍ನ ಇಂಡೋ-ಚೀನಾ ಗಡಿ ಭಾಗದಲ್ಲಿ ತಲೆದೋರಿರುವ ಸಂಘರ್ಷ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಉಭಯ ದೇಶಗಳ ನಡುವೆ ಈವರೆಗೆ ನಡೆದ ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆ ಫಲಪ್ರದವಾಗಿಲ್ಲ.

ಹೀಗಾಗಿ ಪೂರ್ವ ಲಡಾಖ್‍ನ ವಾಸ್ತವ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಯುದ್ಧದ ಕಾರ್ಮೋಡಗಳು ದಟ್ಟವಾಗಿಯೇ ಇದೆ. ಈ ಮಧ್ಯೆ, ಮುಂದಿನ ವಾರ ಭಾರತ-ಚೀನಾ ನಡುವೆ ಉನ್ನತ ಕಮಾಂಡರ್‍ಗಳ ಮಟ್ಟದ ಮಾತುಕತೆ ನಡೆಯಲಿದ್ದು, ಗಡಿ ಸಂಘರ್ಷ ಇತ್ಯರ್ಥಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದೆ.

ಪೂರ್ವ ಲಡಾಖ್‍ನ ಸೂಕ್ಷ್ಮ ಪ್ರದೇಶಗಳಲ್ಲಿ ಜಮಾವಣೆಗೊಂಡಿರುವ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಷಯದಲ್ಲಿ ಭಾರತ-ಚೀನಾ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿರುವ ಮತ್ತು ಭಾರತವೇ ಮೊದಲ ತನ್ನ ಅಗಾಧ ಯುದ್ಧಾಸ್ತ್ರಗಳನ್ನು ವಾಪಸ್ ಕೊಂಡೊಯ್ಯುವಂತೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ಪಟ್ಟು ಹಿಡಿದಿದೆ ಎನ್ನಲಾದ ವರದಿಗಳ ಹಿನ್ನೆಲೆಯಲ್ಲಿ ಈ ಮಾತುಕತೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ.

ಒಂದು ಮೂಲದ ಪ್ರಕಾರ ನಾಳೆ ಅ.19ರಂದು ಉಭಯ ದೇಶಗಳ ನಡುವೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆಯಾದರೂ, ಅದು ದೃಢಪಟ್ಟಿಲ್ಲ. ಲಡಾಖ್‍ನ ಗಡಿ ಭಾಗ ಚುಸಾಲ್‍ನಲ್ಲಿ ಅ.12ರಂದು ಎರಡೂ ರಾಷ್ಟ್ರಗಳ ಉನ್ನತ ಕಮ್ಯಾಂಡರ್‍ಗಳ ನಡುವೆ 7ನೇ ಕಾಪ್ರ್ಸ್ ಕಮ್ಯಾಂಡರ್‍ಗಳ ಮಟ್ಟದ ಮಾತುಕತೆ ನಡೆದಿತ್ತು. 12 ತಾಸುಗಳ ಸುದೀರ್ಘ ಮಾತುಕತೆ ನಂತರವೂ ನಿರ್ದಿಷ್ಟ ತೀರ್ಮಾಣಕ್ಕೆ ಬರಲಾಗದ ಹಿನ್ನೆಲೆಯಲ್ಲಿ ಮುಂದಿನ ವಾರ 8ನೇ ಸಮಾಲೋಚನೆ ಜರುಗಲಿದೆ.

ಸಭೆಯ ಬಳಿಕ ಜಂಟಿ ಹೇಳಿಕೆ ನೀಡಿದ ಉಭಯ ದೇಶಗಳು, ಗಡಿ ಭಾಗದಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಅತಿ ಶೀಘ್ರವೇ ಒಮ್ಮತದ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದ್ದವು.   ಈವರೆಗೆ ಇಂಡೋ-ಚೀನಾ ನಡುವೆ ನಡಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಗಳು ನಿರೀಕ್ಷಿತ ಫಲ ನೀಡಿದ್ದರೂ, ಪೂರಕ ಚರ್ಚೆ ನಡೆದಿದೆ ಎಂದು ತಿಳಿಸಲಾಗಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮೊನ್ನೆ ಹೇಳಿಕೆಯೊಂದನ್ನು ನೀಡಿ, ಉಭಯ ದೇಶಗಳ ನಡುವೆ ಗೌಪ್ಯ ಚರ್ಚೆಗಳು ನಡೆದಿವೆ. ಅದನ್ನು ಈಗ ಸಾರ್ವಜನಿಕವಾಗಿ ಬಿಹಿರಂಗಗೊಳಿಸಲು ಸಾದ್ಯವಿಲ್ಲ ಎಂದು ತಿಳಿಸಿದ್ದರು.
ಕುತಂತ್ರಿ ಚೀನಾ ಪ್ರತಿ ಚರ್ಚೆಯಲ್ಲಿ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಹೇಳಿ ನಂತರ ತನ್ನ ಮಾತಿಗೆ ತಪ್ಪುತ್ತಿರುವುದರಿಂದ ಚರ್ಚೆ ವಿಫಲವಾಗುತ್ತಲೇ ಇದೆ.

Facebook Comments