BIG NEWS : ಇಲ್ಲಿದೆ ರಾಜ್ಯದ ಜನತೆ ಆತಂಕಕ್ಕೊಳಗಾಗುವ ಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.3- ನೆರೆ ರಾಜ್ಯಗಳಿಂದ ಸಾಲುಗಟ್ಟಿ ಬರುತ್ತಿರುವ ವಲಸಿಗರಿಂದ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಪ್ರಮಾಣ ದಂಗುಬಡಿಸುವಂತಿದೆ. ಇದೇ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೆ ವೈದ್ಯಕೀಯ ಸೌಲಭ್ಯದ ಅಭಾವ ಎದುರಾಗುವ ಆತಂಕ ನಿರ್ಮಾಣವಾಗಿದೆ.

ರಾಜ್ಯ ಸರ್ಕಾರ ಕೊರೊನಾ ವಿರುದ್ಧದ ಹೋರಾಟದಲ್ಲಿ ಇತರ ರಾಜ್ಯಗಳಿಗಿಂತ ಸದಾ ಒಂದು ಹೆಜ್ಜೆ ಮುಂದೆ ಇತ್ತು. ಮಾರ್ಚ್ ಕೊನೆಯ ದಿನಗಳಲ್ಲಿ ಕಾಣಿಸಿಕೊಂಡ ಸೋಂಕನ್ನು ಆಗ್ರಹ ಪೂರ್ವಕವಾಗಿ ನಿಗ್ರಹಿಸಿರುವ ರಾಜ್ಯ ಸರ್ಕಾರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.

ಹೊರ ರಾಜ್ಯಗಳಿಂದ ವಲಸೆ ಬರಲು ಆರಂಭವಾದ ಮೇಲೆ ಸೋಂಕಿನ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ರಾಜ್ಯ ಸರ್ಕಾರ ಸೃಷ್ಟಿಸಿರುವ ವೈದ್ಯಕೀಯ ಸೌಲಭ್ಯಗಳು ಸಾಲದಾಗಿ ಮತ್ತೆ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಅವಕಾಶವಾಗಿ ಬಿಡಬಹುದು ಎಂಬ ಭೀತಿ ಎದುರಾಗಿದೆ. ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾಗಾಗಿ ಪ್ರತ್ಯೇಕ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದೆ.

ಅದರಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 900 ಹಾಸಿಗೆಗಳು, ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 800 ಹಾಸಿಗೆಗಳು, ಬೌರಿಂಗ್ ಆಸ್ಪತ್ರೆಯಲ್ಲಿ 260 ಹಾಸಿಗೆಗಳು, ಬೀದರ್‍ನ ಬ್ರಿಮ್ಸ್ ನಲ್ಲಿ 1100 ಹಾಸಿಗೆಗಳು, ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ 930 ಹಾಸಿಗೆಗಳು, ಬೆಳಗಾವಿ ಬಿಮ್ಸ್‍ನಲ್ಲಿ 750 ಹಾಸಿಗೆಗಳು, ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ 905 ಹಾಸಿಗೆಗಳು, ಹಾಸನದಲ್ಲಿ 750 ಹಾಸಿಗೆಗಳು ಸೇರಿ ಒಟ್ಟು 13,733 ಹಾಸಿಗೆಗಳನ್ನು ಪ್ರತ್ಯೇಕವಾಗಿ ಕಾಯ್ದಿರಿಸಿರುವುದಾಗಿ ಹೇಳಲಾಗುತ್ತಿದೆ. ಇವುಗಳ ಪೈಕಿ ಬೆಂಗಳೂರಿನ ರಾಜರಾಜೇಶ್ವರಿ ಮತ್ತು ಉಡುಪಿಯ ಡಾ.ಟಿ.ಎಂ.ಪೈ ಆಸ್ಪತ್ರೆಗಳು ಖಾಸಗಿ ಒಡೆತನಕ್ಕೆ ಸೇರಿವೆ. ಉಳಿದೆಲ್ಲವೂ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಾಗಿವೆ.

ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಸುಲಿಗೆ ಮಾಡಿರುವ ಕುರಿತು ದೂರು ಬಂದರೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಯಾವ ರೋಗಿ ಮತ್ತು ಅವರ ಕಡೆಯವರು ದೂರು ನೀಡುವ ಧೈರ್ಯ ಮಾಡುತ್ತಿಲ್ಲ. ಹಾಗಾಗಿ ಸುಲಿಗೆ ಮಾಡುವ ಆಸ್ಪತ್ರೆಗಳು ನಿರಾತಂಕವಾಗಿವೆ.

ಈಗ ಎದುರಾಗಿರುವ ಸಮಸ್ಯೆ ಏನೆಂದರೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಸರ್ಕಾರ 13 ಸಾವಿರ ಹಾಸಿಗೆಗಳನ್ನು ಸಿದ್ಧಪಡಿಸಿದೆ. 323 ಐಸೊಲೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ.

ಜೊತೆಗೆ ರಾಜ್ಯಾದ್ಯಂತ 246 ಕ್ವಾರಂಟೈನ್ ಸೆಂಟರ್‍ಗಳು ಇವೆ. ಆದರೆ ರಾಜ್ಯಕ್ಕೆ ಹರಿದು ಬರುತ್ತಿರುವ ವಲಸಿಗರ ಪ್ರಮಾಣ, ಅವರಿಂದಾಗಿ ಹೆಚ್ಚಾಗುತ್ತಿರುವ ಸೋಂಕು ನೋಡಿದರೆ ಈ ಸೌಲಭ್ಯಗಳು ಸಾಲದಾಗುವ ಸಾಧ್ಯತೆ ಇದೆ.

ನಿನ್ನೆ ಒಂದೇ ದಿನ 388 ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ. ಅವರಲ್ಲಿ 367 ಮಂದಿ ಅನ್ಯರಾಜ್ಯಗಳಿಂದ ವಲಸೆ ಬಂದವರಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ತಮ್ಮಲ್ಲಿದ್ದ ವಲಸಿಗರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸದೆ ಅಲ್ಲಿನ ಸೋಂಕಿತರು ಅಸಾಹಯಕರಾಗಿ ರಾಜ್ಯ ತೊರೆದು ತವರಿಗೆ ಹೋಗುವ ಪರಿಸ್ಥಿತಿ ನಿರ್ಮಿಸಿದೆ.

ಅಲ್ಲಿ ಇರಲಾಗದೆ ವಲಸೆ ಬರಲು ಹೊರಟಿರುವವರನ್ನು ನಿರ್ಬಂಸಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡರೂ ಸಾಧ್ಯವಾಗುತ್ತಿಲ್ಲ. ರಾಜಕೀಯ ಒತ್ತಡಗಳಿಗೆ ಮಣಿದು ಅನ್ಯ ರಾಜ್ಯದವರನ್ನು ಆಹ್ವಾನಿಸಲೇಬೇಕಿದೆ. ಅಲ್ಲಿಗೆ ದುಡಿಯಲು ಹೋಗಿದ್ದವರು ನಮ್ಮ ರಾಜ್ಯದವರೇ ಅಲ್ಲವೇ, ಅವರು ಇಲ್ಲಿಗೆ ಬರದೆ ಬೇರೆಲ್ಲಿಗೆ ಹೋಗಲು ಸಾಧ್ಯ ಎಂಬ ಮಾನವೀಯ ಮಾತುಗಳು ಕೇಳಿ ಬರುತ್ತಿವೆ.

ವಿಶ್ವವನ್ನೇ ಕಂಗೆಡಿಸಿರುವ ಸೋಂಕು ಅದನ್ನು ನಿಗ್ರಹಿಸಲು ಖರ್ಚಾಗುತ್ತಿರುವ ಹಣಕಾಸು ಪ್ರಮಾಣ ನೋಡಿದರೆ, ಬೊಕ್ಕಸದ ಬಗ್ಗೆ ಮರುಕ ಪಡುವುದನ್ನು ಬಿಟ್ಟು ಬೇರೆ ಏನು ಮಾಡಲಾಗದ ಪರಿಸ್ಥಿತಿ ಸೃಷ್ಟಿಯಾಗಿದೆ.

ಸರ್ಕಾರ ಹೇಳಿಕೊಳ್ಳುತ್ತಿರುವಂತೆ 13 ಸಾವಿರ ಬೆಡ್‍ಗಳಲ್ಲೂ ರೋಗಿಗಳನ್ನು ಮಲಗಿಸಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವಾಸ್ತವವಾಗಿ ಆ ಹಾಸಿಗೆಗಳು ಲೆಕ್ಕಕ್ಕಾಗಿ ಸ್ಥಾಪಿಸಲ್ಪಟ್ಟವು. ಸೋಂಕಿತರನ್ನು ಅಲ್ಲಿ ಮಲಗಿಸಿ ಚಿಕಿತ್ಸೆ ಕೊಟ್ಟರೆ ಸೋಂಕು ಸಾಂಕ್ರಾಮಿಕವಾಗುವುದನ್ನು ತಡೆಯುವುದು ಕಷ್ಟ ಎನ್ನುತ್ತಿದ್ದಾರೆ ವೈದ್ಯರು.

ಸುಸಜ್ಜಿತವಾಗಿ ರಾಜ್ಯದಲ್ಲಿ ಚಿಕಿತ್ಸೆಗೆ ಲಭ್ಯ ಇರುವುದು 2490 ಹಾಸಿಗೆಗಳು ಮಾತ್ರ ಎನ್ನಲಾಗುತ್ತಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಾಗಿ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು, ಮೈಸೂರು, ಗದಗ, ಬಳ್ಳಾರಿ ಜಿಲ್ಲಾಸ್ಪತ್ರೆಗಳು, ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆ, ಕಲ್ಬುರ್ಗಿಯ ಇಎಸ್‍ಐ ಆಸ್ಪತ್ರೆ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗಳಲ್ಲಿ ಮಾತ್ರ ಸುಸಜ್ಜಿತ ಸೌಲಭ್ಯಗಳಿವೆ.

ವೆಂಟಿಲೇಟರ್ ಮತ್ತು ಐಸಿಯು ಬೆಡ್‍ಗಳಿವೆ. ಉಳಿದೆಡೆಗಳಲ್ಲಿ ಪ್ರತ್ಯೇಕ ಆಸ್ಪತ್ರೆಗಳಿವೆಯಾದರೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೂಕ್ತ ಪಿಪಿಇ ಕಿಟ್‍ಗಳಿಲ್ಲ. ಸೂಕ್ತ ರಕ್ಷಣಾತ್ಮಕ ಕ್ರಮಗಳಿಲ್ಲ ಎನ್ನಲಾಗುತ್ತಿದೆ.
ನಿನ್ನೆಗೆ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 3796ಕ್ಕೆರಿದೆ.

ಅವುಗಳಲ್ಲಿ 1403 ಮಂದಿ ಚಿಕಿತ್ಸೆ ಪಡೆದು ಡಿಸ್ಜಾರ್ಜ್ ಆಗಿದ್ದಾರೆ. ಇನ್ನೂ 2339 ಮಂದಿ ಸೋಂಕಿನಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 2490 ಹಾಸಿಗೆಗಳ ಪೈಕಿ ಬಾಕಿ ಇರುವುದು ಇನ್ನೂ 150 ಹಾಸಿಗೆಗಳು ಮಾತ್ರ ಎನ್ನಲಾಗುತ್ತಿದೆ.

ಇಂದು ಸಂಜೆಯ ವೇಳೆಗೆ ಆ ಹಾಸಿಗೆಗಳು ಭರ್ತಿಯಾಗುವುದರಲ್ಲಿ ಅನುಮಾನ ಇಲ್ಲ. ಅನ್ಯ ರಾಜ್ಯಗಳಿಂದ ವಲಸೆ ಬರುತ್ತಿರುವವರಲ್ಲಿ ಎಲ್ಲಾ ಜಿಲ್ಲೆಗಗಳಿಗೆ ಸೇರಿದವರಿದ್ದಾರೆ. ಆಯಾ ಜಿಲ್ಲೆಗಳಲ್ಲಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಯುತ್ತಿದೆ. ಪರಿಸ್ಥಿತಿ ಗಂಭೀರವಾದರೆ ವೆಂಟಿಲೇಟರ್ ಮತ್ತು ಐಸಿಯು ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಇನ್ನೂ ಹತ್ತು ಸಾವಿರ ಮಂದಿ ಕರ್ನಾಟಕಕ್ಕೆ ಬರಲು ಕಾದು ಕುಳಿತಿದ್ದಾರೆ. ಅವರನ್ನು ಕರೆ ತಂದರೆ ಅವರಲ್ಲಿ ಎಷ್ಟು ಮಂದಿ ಸೋಂಕಿತರಿದ್ದಾರೋ ಏನೋ. ಈಗಿರುವ ಸೋಂಕಿತರ ಜೊತೆಗಿನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಎಷ್ಟು ಮಂದಿ ಸೋಂಕಿಗೆ ಸಿಲುಕಿದ್ದಾರೆ ಎಂಬ ಲೆಕ್ಕಾಚಾರ ಸ್ಪಷ್ಟವಾಗಿಲ್ಲ.

ಇದೇ ವೇಗದಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದರೆ ಕ್ವಾರಂಟೈನ್ ಗೆ ಖಾಸಗಿ ಆಶ್ರಯವನ್ನು ನಂಬಿಕೊಂಡಂತೆ ಚಿಕಿತ್ಸೆಗೂ ಖಾಸಗಿ ಆಸ್ಪತ್ರೆಗಳನ್ನು ಅವಲಂಭಿಸಬೇಕಾಗಿತ್ತದೆ. ಈಗಾಗಲೇ ತಮ್ಮ ಬಳಿ ಬರುವ ಒಂದೆರಡು ಪ್ರಕರಣಗಳಲ್ಲೇ ಸುಲಿಗೆ ಮಾಡುತ್ತಿರುವ ಖಾಸಗಿ ಅಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳ ಬೆಡ್‍ಗಳು ಖಾಲಿಯಾಗಿ, ಅನಿವಾರ್ಯವಾಗಿ ತಮ್ಮ ಬಳಿ ಬರುವ ರೋಗಿಗಳನ್ನು ಸುಲಿಗೆ ಮಾಡದೆ ಬಿಡಬಹುದೆ ಎಂಬ ಜಿಜ್ಞಾಸೆ ಕಾಡುತ್ತಿದೆ.

ಈಗಾಗಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ರಾಜ್ಯ ಸರ್ಕಾರ ಎಷ್ಟು ಎಂದು ವ್ಯವಸ್ಥೆ ಮಾಡಲು ಸಾಧ್ಯ ಎಂದು ಕೈ ಚೆಲ್ಲಿ ಕುಳಿತರೂ ಆಶ್ಚರ್ಯ ಪಡಬೇಕಿಲ್ಲ. ಒಟ್ಟಿನಲ್ಲಿ ಸೋಂಕಿನ ರಗಳೆಗಳ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನಗಳಿಲ್ಲ.

Facebook Comments

Sri Raghav

Admin