ಲಡಖ್‍ನಲ್ಲಿ ಭಾರತ-ಚೀನಾ ಯೋಧರ ನಡುವೆ ಘರ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.12-ಕಾಶ್ಮೀರ ಕಣಿವೆಯ ಗಡಿ ಭಾಗದಲ್ಲಿ ಪಾಕಿಸ್ತಾನಿ ಯೋಧರು ತಗಾದೆ ತೆಗೆಯುತ್ತಿರುವ ಸಂದರ್ಭದಲ್ಲೇ ಇತ್ತ ಲಡಾಖ್ ಪ್ರದೇಶದಲ್ಲಿ ಚೀನಿ ಸೈನಿಕರು ತಕರಾರು ಮಾಡಿದ್ದಾರೆ. ಚೀನಾ ಸೇನಾಪಡೆಯ ಕ್ಯಾತೆಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ಉಭಯ ಪಡೆಗಳ ನಡುವೆ ಕೆಲಕಾಲ ಬಿರುಸಿನ ಮಾತಿನ ಚಕಮಕಿ ನಡೆದು ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಉನ್ನತ ಮಟ್ಟದ ಮಾತುಕತೆ ಮೂಲಕ ಪರಿಸ್ಥಿತಿ ತಿಳಿಗೊಂಡಿದೆ. ಪೂರ್ವ ಲಡಖ್ ಬಳಿ ಪ್ಯಾನ್‍ಗೊಂಗ್ ಟಿಸೋ ಸರೋವರದ ಬಳಿ ಈ ಘಟನೆ ನಡೆದಿದೆ.

ಈ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆಗಳು ಗಸ್ತು ತಿರುಗುತ್ತಿತ್ತು. ಇದಕ್ಕೆ ಚೀನಾ ಸೇನಾ ಸಿಬ್ಬಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ಇಂಡೋ-ಚೀನಾ ವಾಸ್ತವ ನಿಯಂತ್ರಣ ರೇಖೆ(ಎಲ್‍ಎಸಿ) ವಿಷಯದಲ್ಲಿ ಉಭಯ ಸೇನಾಪಡೆಗಳ ನಡುವೆ ಸಣ್ಣದಾಗಿ ಆರಂಭವಾದ ಜಗಳ ನಂತರ ತೀವ್ರ ಸ್ವರೂಪ ಪಡೆದು ಭಾರೀ ಮಾತಿನ ಚಕಮಕಿ ಮತ್ತು ವಾದ-ವಾಗ್ವಾದ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ನಂತರ ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಮಾತುಕತೆ ಮೂಲಕ ಈ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಾಯಿತು ಎಂದು ಸೇನಾ ಮೂಲಗಳು ತಿಳಿಸಿವೆ.  ಕೇಂದ್ರ ಸರ್ಕಾರ ಆರ್ಟಿಕಲ್ 370 ರದ್ದತಿ ನಂತರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರ ಮತ್ತು ಲಢಖ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳು ರಚನೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದೆಡೆ ಪಾಕಿಸ್ತಾನ ಮತ್ತು ಇನ್ನೊಂದೆಡೆ ಚೀನಾ ಕ್ಯಾತೆ ಆರಂಭಿಸಿದೆ.

ಈ ಹಿಂದೆ ಈಶಾನ್ಯ ಪ್ರಾಂತ್ಯ ಗಡಿ ಭಾಗವಾದ ಡೊಕ್ಲಂನಲ್ಲಿ ಭಾರತ ಮತ್ತು ಚೀನಾ ನಡುವೆ ಸೇನೆ ಜಮಾವಣೆ ವಿಷಯಕ್ಕೆ ಸಂಬಂಧಿಸಿದಂತೆ 79 ದಿನಗಳ ಕಾಲ ಬಿಕ್ಕಟ್ಟು ಮುಂದುವರಿದು ಯುದ್ಧದ ಕಾರ್ಮೋಡಗಳು ಕವಿದಿದ್ದವು. ನಂತರ ಆಗಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ದಿಟ್ಟ ರಾಜತಾಂತ್ರಿಕ ಕ್ರಮಗಳಿಂದ ವಿವಾದ ಇತ್ಯರ್ಥವಾಗಿತ್ತು.

Facebook Comments