ಲಡಾಕ್ ಗಡಿಯಲ್ಲಿ ಕದನ ಕಾರ್ಮೋಡ : ಭಾರತ-ಚೀನಾ ಸೇನಾಧಿಕಾರಿಗಳ ಉನ್ನತ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಲಡಾಕ್, ಜೂ.2-ಇಂಡೋ-ಚೀನಾ ಗಡಿ ಭಾಗವಾದ ಲಡಾಕ್‍ನಲ್ಲಿ ನಿರ್ಮಾಣಗೊಂಡಿರುವ ಉದ್ವಿಗ್ನ ಸ್ಥಿತಿಯನ್ನು ತಿಳಿಗೊಳಿಸಲು ಉಭಯ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳ ಉನ್ನತಮಟ್ಟದ ಸಭೆ ಇಂದು ನಡೆಯಲಿದೆ.

ಇದೇ ವೇಳೆ, ಇಡೀ ವಿಶ್ವವೇ ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ನಲುಗುತ್ತಿರುವಾಗಲೇ ಚೀನಾ ತೆಗೆದಿರುವ ಖ್ಯಾತೆಗೆ ಅಮೆರಿಕ ತೀವ್ರ ಆಸಮಾಧಾನ ವ್ಯಕ್ತಪಡಿಸಿದೆ.

ಲಡಾಕ್ ಗಡಿಯಲ್ಲಿ ಎರಡೂ ದೇಶಗಳ ಭಾರೀ ಪ್ರಮಾಣದ ಸೇನೆ ಮತ್ತು ಯುದ್ಧಾಸ್ತ್ರಗಳು ಜಮಾವಣೆಗೊಂಡಿದ್ದು, ಕದನ ಕಾರ್ಮೋಡಗಳು ದಟ್ಟೈಸುತ್ತಿವೆ. ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಭಾರತ-ಚೀನಾ ಸೇನಾಪಡೆಗಳ ಮೇಜರ್ ಜನರಲ್ ಮಟ್ಟದ ಉನ್ನತಾಧಿಕಾರಿಗಳ ಮಹತ್ವದ ಸಭೆ ಇಂದು ನಡೆಯುತ್ತಿರುವುದು ಅತ್ಯಂತ ಪ್ರಮುಖ ವಿದ್ಯಮಾನವಾಗಿದೆ.

ಇದು ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮೂರನೇ ಮಿಲಿಟರಿ ಮಾತುಕತೆಯಾಗಿದೆ. ಉನ್ನತಮಟ್ಟದ ಸೇನೆ ಹಿರಿಯ ಅಧಿಕಾರಿಗಳ ಸಮಾಲೋಚನೆ ವೇಳೆ ಭಾರತದ ಅಭಿಪ್ರಾಯಗಳು ಮತ್ತು ಸ್ಪಷ್ಟ ನಿಲುವು ತಿಳಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಈಗಾಗಲೇ ನಡೆದಿರುವ ಎರಡು ಸಭೆಗಳಲ್ಲಿ ಉಭಯ ದೇಶಗಳ ಸೇನಾಧಿಕಾರಿಗಳು ಅಭಿಪ್ರಾಯಗಳನ್ನು ಮಂಡಿಸಿದ್ದರು. ಎರಡನೇ ಸಭೆಯಲ್ಲಿ ಕೆಲವು ನಿರ್ದಿಷ್ಟ ಅಂಶಗಳ ಬಗ್ಗೆ ಮಾತ್ರ ಒಪ್ಪಂದವಾಗಿತ್ತು.

ಆದರೆ ಈ ಚರ್ಚೆಗಳ ವೇಳೆ ಯಾವುದೇ ಸ್ಪಷ್ಟ ನಿರ್ಧಾರಗಳಿಗೆ ಬರಲು ಸಾಧ್ಯವಾಗಿಲ್ಲ. ಎರಡನೇ ಸಭೆ ನಂತರ ಗಡಿಯಲ್ಲಿ ಜಮಾವಣೆಗೊಂಡಿದ್ದ ಬೃಹತ್ ವಾಹನಗಳು ಹಿಂದಕ್ಕೆ ಸರಿಯಲು ಒಪ್ಪಿಗೆ ಸೂಚಿಸಲಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದಿನ ಉನ್ನತ ಮಟ್ಟದ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.

ಮೇ ತಿಂಗಳ ಆರಂಭದಿಂದಲೂ ಲಡಾಕ್‍ನಲ್ಲಿ ಚೀನಾ ಸೇನೆ ಕ್ಯಾತೆ ತೆಗೆದಿದೆ. ಮೇ 5ರಂದು ಮಧ್ಯರಾತ್ರಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿ ಅನಧಿಕೃತ ನಿರ್ಮಾಣ ಕಾಮಗಾರಿಗಳನ್ನು ಚುರುಕುಗೊಳಿಸಿತು.  ನಂತರ ಭಾರತ ಚೀನಾಗೆ ತಿರುಗೇಟಿ ನೀಡಿ ತನ್ನ ಸೇನಾ ಪಡೆಗಳನ್ನು ನಿಯೋಜಿಸಿತು.

ಇದರಿಂದಾಗಿ ಲಡಾಕ್‍ನ ಪಂಗೊಂಗ್ ಸರೋವರದ ಉತ್ತರ ಭಾಗದ ಫೈವ್ ಫಿಂಗರ್ ಎಂಬಲ್ಲಿ ಘರ್ಷಣೆ ನಡೆದಿತ್ತು. ಈ ಘಟನೆಯಲ್ಲಿ ಉಭಯ ದೇಶಗಳ ಯೋದರು ಗಾಯಗೊಂಡರು. ಅಗಿನಿಂದ ಲಡಾಕ್‍ನಲ್ಲಿ ಪ್ರಕ್ಷುಬ್ಧ ಸ್ಥಿತಿ ನೆಲೆಸಿದ್ದು, ಈಗ ಕದನ ಕಾರ್ಮೋಡಗಳು ದಟ್ಟವಾಗುತ್ತಿವೆ.

ಈ ಮಧ್ಯೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಹತ್ದವ ಸಭೆಗಳನ್ನು ನಡೆಸಿದ್ದಾರೆ.ಭಾರತ ಸೇನಾ ಪಡೆಯ ಮಹಾ ದಂಡನಾಯಕ ಬಿಪಿನ್ ರಾವತ್ ಹಾಗೂ ಮೂರು ಸೇನಾಪಡೆಗಳಾದ ಭೂಸೇನೆ, ವಾಯುಪಡೆ ಮತ್ತು ನೌಕಾದಳದ ಮುಖ್ಯಸ್ಥರೊಂದಿಗೆ ಮುಂದಿನ ಕಾರ್ಯತಂತ್ರಗಳ ಬಗ್ಗೆ ಈಗಾಗಲೇ ಚರ್ಚಿಸಿದ್ದಾರೆ.

ಈ ಮಧ್ಯೆ, ಇಡೀ ವಿಶ್ವವೇ ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ನಲುಗುತ್ತಿರುವಾಗಲೇ ಚೀನಾ ತೆಗೆದಿರುವ ಖ್ಯಾತೆಗೆ ಅಮೆರಿಕ ತೀವ್ರ ಆಸಮಾಧಾನ ವ್ಯಕ್ತಪಡಿಸಿದೆ. ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪಿಯೋ ಹಾಗೂ ವಿದೇಶಾಂಗ ವ್ಯವಹಾರಗಳ ಘಟಕದ ಮುಖ್ಯಸ್ಥ ಎಂಗೆಲ್ ಅವರು ಚೀನಾದ ದುರ್ವತನೆ ಮತ್ತು ಹಠಮಾರಿತನವನ್ನು ಖಂಡಿಸಿ ತರಾಟೆಗೆ ತೆಗೆದುಕೊಂಡಿದ್ಧಾರೆ.

Facebook Comments