BIG BREAKING : “ಚೀನಿಯರು ಬಾಲ ಬಿಚ್ಚಿದರೆ ಮುಲಾಜಿಲ್ಲದೆ ಶಸ್ತ್ರಾಸ್ತ್ರ ಬಳಸಿ” : ಸೇನೆಗೆ ಸರ್ಕಾರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಗಾಲ್ವಾನ್‍ಕಣಿವೆ,ಜೂ.21- ಪೂರ್ವ ಲಡಾಕ್ ಭಾಗದಲ್ಲಿ ತಲೆದೋರಿರುವ ಪ್ರಕ್ಷುಬ್ಧ ಪರಿಸ್ಥಿತಿ ನಡುವೆ ಚೀನಿ ಸೈನಿಕರು ದುಸ್ಸಾಹಕ್ಕೆ ಕೈ ಹಾಕಿದರೆ ಶಸ್ತ್ರಾಸ್ತ್ರಗಳನ್ನು ಬಳಸಲು ಹಿಂದೇಟು ಹಾಕಬೇಡಿ ಎಂದು ಕೇಂದ್ರ ಸರ್ಕಾರ ಗಡಿಭಾಗದಲ್ಲಿರುವ ಭಾರತೀಯ ಯೋಧರಿಗೆ ಸ್ಪಷ್ಟ ಸೂಚನೆ ನೀಡಿದೆ.

ಇಂಡೋ-ಚೀನಾ ಗಡಿಭಾಗಗಳಲ್ಲಿ ಅಕ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವ ಚೀನಿ ಸೇನಾಪಡೆ ಅಪ್ರಚೋದಿತ ದಾಳಿ ನಡೆಸಿದರೆ ಅಥವಾ ಯಾವುದೇ ದುಸ್ಸಾಹಕ್ಕೆ ಕೈ ಹಾಕಿದರೆ ತಕ್ಕ ಪ್ರತ್ಯುತ್ತರ ನೀಡುವಂತೆ ಭಾರತೀಯ ಸೇನಾಪಡೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ದೆಹಲಿಯಲ್ಲಿಂದು ನಡೆದ ಭಾರತೀಯ ಸೇನಾಪಡೆಯ ಮಹಾಮುಖ್ಯಸ್ಥರು ಮತ್ತು ಮೂರು ಶಸ್ತ್ರಸ್ತ್ರ ದಳಗಳ ಉನ್ನತ ನಾಯಕರೊಂದಿಗೆ ಸಭೆ ನಂತರ ರಾಜನಾಥ್ ಸಿಂಗ್ ಈ ಸೂಚನೆ ನೀಡಿದ್ದಾರೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ.

ಗಾಲ್ವಾನ್ ಕಣಿವೆಯಲ್ಲಿ ಚೀನಿ ಯೋಧರ ಕ್ರೌರ್ಯದ ನಂತರ ಗಡಿಭಾಗದಲ್ಲಿ ಭಾರತೀಯರು ಕುಪಿತರಾಗಿದ್ದು ಚೀನಿ ಸೈನಿಕರಿಗೆ ತಕ್ಕ ಪಾಠ ಕಲಿಸಲು ಕಾಯುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರದ ಈ ಸೂಚನೆ ಅತ್ಯಂತ ಮಹತ್ವದ್ದಾಗಿದೆ.

ನಿನ್ನೆಗಿಂತಲೂ ಇಂದು ಉಭಯ ದೇಶಗಳ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಪ್ರಕ್ಷುಬ್ದಗೊಂಡಿದ್ದು, ಯಾವುದೇ ಹಂತದಲ್ಲಿ ಅದು ಸ್ಪೋಟಗೊಳ್ಳುವ ಆತಂಕವೂ ಇದೆ. ಆದಾಗ್ಯೂ ಭಾರತ ಶಾಂತಿಗೂ ಜೈ, ಯುದ್ಧಕ್ಕೂ ಸೈ ಎಂಬ ಧೋರಣೆಯೊಂದಿಗೆ ಗಡಿಭಾಗದಲ್ಲಿ ಸರ್ವಸನ್ನದ್ದವಾಗಿದೆ.

Facebook Comments

Sri Raghav

Admin