ಇಡಿ ಎದುರು ‘ಲಕ್ಷ್ಮೀ’ಹೆಬ್ಬಾಳ್ಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.19- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಇಂದು ನವದೆಹಲಿಯಲ್ಲಿ ಜಾರಿನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ವಿಚಾರಣೆ ನಡೆಸಿದರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಸೆ.14ಕ್ಕೆ ವಿಚಾರಣೆಗೆ ಹಾಜರಾಗುವಂತೆ ಲಕ್ಷ್ಮೀಹೆಬ್ಬಾಳ್ಕರ್ ಅವರಿಗೂ ಸಮನ್ಸ್ ನೀಡಿದ್ದರು.

ಆದರೆ, ಅಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ತಮ್ಮ ಕ್ಷೇತ್ರದಲ್ಲಿ ಪ್ರವಾಹ ಪರಿಸ್ಥಿತಿ ಇದೆ. ನವದೆಹಲಿ ಬದಲಾಗಿ ಬೆಳಗಾವಿ ಅಥವಾ ಬೆಂಗಳೂರಿನಲ್ಲಿ ವಿಚಾರಣೆ ನಡೆಸಿದರೆ ತಾವು ಹಾಜರಾಗುವುದಾಗಿ ಲಕ್ಷ್ಮೀಹೆಬ್ಬಾಳ್ಕರ್ ಮನವಿ ಮಾಡಿದ್ದರು.

ಆದರೆ, ಅದಕ್ಕೆ ಇಡಿ ಅಧಿಕಾರಿಗಳು ಅನುಮತಿ ನೀಡದೆ ಇಂದು (ಸೆ.19) ವಿಚಾರಣೆಗೆ ಹಾಜರಾಗುವಂತೆ ಎರಡನೇ ಬಾರಿ ಸಮನ್ಸ್ ನೀಡಿದ್ದರು. ಪದೇ ಪದೇ ಸಮನ್ಸ್ ಉಲ್ಲಂಘನೆ ಮಾಡಿದರೆ ಬಂಧಿಸುವ ಸಾಧ್ಯತೆ ಇರುವುದರಿಂದ ಖುದ್ದಾಗಿ ವಿಚಾರಣೆಗೆ ಹಾಜರಾಗಲು ಲಕ್ಷ್ಮೀಹೆಬ್ಬಾಳ್ಕರ್ ನಿರ್ಧರಿಸಿದ್ದರು.

ನಿನ್ನೆ ನವದೆಹಲಿಗೆ ತೆರಳಿರುವ ಅವರು ಇಂದು ಬೆಳಗ್ಗೆ ತಮ್ಮ ವಕೀಲರು ಹಾಗೂ ಚಾರ್ಟೆಡ್ ಅಕೌಂಟೆಂಡ್ಸ್ ಜತೆ ಚರ್ಚೆ ಮಾಡಿ ನಂತರ ವಿಚಾರಣೆಗೆ ಹಾಜರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಪ್ರಕರಣದಲ್ಲಿ 184 ಮಂದಿಗೆ ಇಡಿ ನೋಟಿಸ್ ನೀಡಿದೆ. ಅದರಲ್ಲಿ ಈಗಾಗಲೇ ಸುನೀಲ್ ಶರ್ಮಾ, ಸಚಿನ್ ನಾರಾಯಣ್, ಆಂಜನೇಯ ಸೇರಿದಂತೆ ಐದು ಮಂದಿಯನ್ನು ಆರೋಪಿಗಳು ಎಂದು ಪರಿಗಣಿಸಲಾಗಿದೆ.

ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಲಕ್ಷ್ಮೀಹೆಬ್ಬಾಳ್ಕರ್ ಅವರು ಬಳ್ಳಾರಿ ಪವರ್ ಪ್ಲ್ಯಾಂಟ್ ನಿರ್ಮಾಣ ಮತ್ತು ಎಲ್‍ಇಡಿ ಬಲ್ಬ್ ಪೂರೈಕೆ ಗುತ್ತಿಗೆಯನ್ನು ಪಡೆದುಕೊಂಡಿದ್ದರು ಎಂದು ಎನ್ನಲಾಗಿದೆ.

ತಮ್ಮ ಮನೆ ಮೇಲೆ ಆದಾಯ ತೆರಿಗೆ ದಾಳಿಯಾದಾಗ ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ಕರೆ ಮಾಡಿದ್ದರು ಎಂದು ಹೇಳಲಾಗಿದೆ. ಆ ವೇಳೆ ಸಾಕ್ಷ್ಯಗಳನ್ನು ನಾಶಪಡಿಸುವಂತೆ ಲಕ್ಷ್ಮೀಹೆಬ್ಬಾಳ್ಕರ್‍ಗೆ ಸೂಚಿಸಿದ್ದರು ಎಂಬ ಅನುಮಾನ ಇಡಿ ಅಧಿಕಾರಿಗಳನ್ನು ಕಾಡುತ್ತಿದೆ.

ಡಿ.ಕೆ.ಶಿವಕುಮಾರ್ ಅವರಿಗೆ ಈ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನೀಡದೇ ಇರುವುದರಿಂದ ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗಿದೆ ಎಂದು ತಿಳಿದು ಬಂದಿದೆ.

Facebook Comments

Sri Raghav

Admin