ಸತೀಶ್ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಟಾಕ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಜೂ.1- ನಗರದ ಕೊಳಚೆ ನೀರು ಶುದ್ಧೀಕರಣ ಯೋಜನೆ ವಿವಾದ ತಾರಕಕ್ಕೇರಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ನಡುವೆ ವಾಕ್ಸಮರ ತಾರಕಕ್ಕೇರಿದೆ.  ಯೋಜನೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿ ಗಲಾಟೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೇ ಯೋಜನೆಗೆ ಬೇಕಾದ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದು, ಕಾನೂನು ಪ್ರಕ್ರಿಯೆ ಕೂಡ ಸಂಪೂರ್ಣವಾಗಿದೆ. ರೈತರಿಗೆ ಕೊಡಬೇಕಾದ ಪರಿಹಾರವನ್ನು ನೀಡಲು ಮುಂದಾಗಿದೆ. ಈ ಸಂದರ್ಭದಲ್ಲಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಎಷ್ಟು ಸಮಂಜಸ ಎಂದು ಕಿಡಿಕಾರಿದ್ದಾರೆ.

ನಮಗೂ ರೈತರ ಬಗ್ಗೆ ಕಾಳಜಿಯಿದೆ. ರೈತರಿಗೆ ನಷ್ಟ ಆಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಸಿದ್ದವಿದೆ. ಈ ಜವಾಬ್ದಾರಿಯನ್ನು ನಾನೇ ನಿರ್ವಹಿಸುತ್ತೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಈ ಸಂಬಂಧ ಸ್ಥಳೀಯ ಶಾಸಕರಿಗೂ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಕಳೆದ 2 ವರ್ಷಗಳ ಹಿಂದೆಯೇ ನಗರ ನೀರು ಶುದ್ಧೀಕರಣ ಯೋಜನೆ ಕಾರ್ಯ ರೂಪಕ್ಕೆ ಬಂದಿದ್ದು, ಇದು ನಮ್ಮ ನಗರಕ್ಕೆ ಅನಿವಾರ್ಯ ಆಗಿದೆ. ರೈತರಿಗೆ ಯಾವುದೇ ರೀತಿಯ ನಷ್ಟ ಆಗದಂತೆ ಈ ಯೋಜನೆಯನ್ನು ಜಾರಿ ಮಾಡುವುದು ನಮ್ಮ ಉದ್ದೇಶವಾಗಿದೆ.

ವಿಶೇಷ ಪ್ರಕರಣ ಎಂದು ಪರಿಗಣಿಸಿ ಒಂದು ಎಕರೆಗೆ 30 ಲಕ್ಷ ರೂ. ಕೊಡಿಸುವ ಬಗ್ಗೆ ಪ್ರಸ್ತಾವನೆ ಇದ್ದು ಸರ್ಕಾರ ಕೂಡ ಈಗಾಗಲೇ ಸರ್ಕಾರದ ಹಣ ಬಿಡುಗಡೆಯಾಗಿ ಮತ್ತೆ ವಾಪಸ್ಸಾಗಿದ್ದು, 2ನೇ ಬಾರಿಗೆ ಹಣ ವಾಪಸ್ಸಾದರೆ ರೈತರಿಗೆ ಪರಿಹಾರ ನೀಡುವುದು ಕಷ್ಟವಾಗುತ್ತದೆ. ಯೋಜನೆ ನೆನೆಗುದಿಗೆ ಬೀಳುತ್ತದೆ. ಇದನ್ನ ಸ್ಥಳೀಯ ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಕಿಡಿಕಾರಿದ್ದಾರೆ.

ಪ್ರತಿಭಟನೆ ಮಾಡುವುದು, ರೈತರನ್ನು ಎತ್ತಿ ಕಟ್ಟುವುದನ್ನು ಕೈ ಬಿಟ್ಟು ಯೋಜನೆ ಜಾರಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.. ಜಿಲ್ಲಾಧಿಕಾರಿಗಳು ಬದಲಾವಣೆ ಆದರೆ ರೈತರಿಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂಬ ಹೆಬ್ಬಾಳ್ಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾವ ಜಿಲ್ಲಾಧಿಕಾರಿಗಳು ಬಂದರೂ ಏನೂ ಮಾಡಲು ಆಗುವುದಿಲ್ಲ.

ಈ ಯೋಜನೆಗೆ ಜಮೀನು ಕೊಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳ ಮೇಲಿರುತ್ತದೆ. ನ್ಯಾಯಾಲಯದ ನಿರ್ದೇಶನವೂ ಹಾಗೆಯೇ ಇದೆ ಎಂದರು.
ಶಾಸಕರು ಕೂಡ ಸರ್ಕಾರದ ಒಂದು ಭಾಗ, ರೈತರಿಗೆ ತಿಳಿ ಹೇಳುವುದು ಅವರ ಕರ್ತವ್ಯ. ಯೋಜನೆಯ ಬಗ್ಗೆ ಇಬ್ಬರ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ ಎಂದು ತಿಳಿಸಿದರು.

ಕೊಳಚೆ ನೀರು ಶುದ್ಧೀಕರಣ ಯೋಜನೆಗೆ ವಿರೋಧ ವ್ಯಕ್ತಡಿಸಿ ನಿನ್ನೆಯಷ್ಟೇ ಆ ಭಾಗದ ರೈತರು ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಅವರ ಎದುರೇ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಅಧಿಕಾರಿಗಳಿಗೆ ತಂದಿದ್ದ ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು.

Facebook Comments