ಕಣ್ಮನ ಪುಳಕಿತಗೊಳಿಸುವ ‘ಸಸ್ಯಕಾಶಿ’ಯ ಸೌಂದರ್ಯವನ್ನು ಮಿಸ್ ಮಾಡಿಕೊಳ್ಳಬೇಡಿ

ಈ ಸುದ್ದಿಯನ್ನು ಶೇರ್ ಮಾಡಿ

Lalbhag--01

ದೇಶದ ನೆಲ, ಜಲ, ಜನರ ರಕ್ಷಣೆ ಹೊಣೆ ಹೊತ್ತಿರುವ ಭೂ ಸೇನೆ, ವಾಯು ಸೇನೆ, ನೌಕಾ ಪಡೆ ಹಾಗೂ ಇತರೆ ಗಡಿ ರಕ್ಷಣಾ ಪಡೆಗಳ ಪ್ರತಿಕೃತಿಗಳನ್ನು ಪುಷ್ಪಗಳಲ್ಲಿ ಅನಾವರಣಗೊಳಿಸುವ ಮೂಲಕ ಭಾರತೀಯ ಸೇನೆಗೆ ಪುಷ್ಪ ನಮನ ಸಲ್ಲಿಸುತ್ತಿದೆ. ಈ ಸಾಲಿನ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ವಿಶೇಷ ರೀತಿಯಲ್ಲಿ ಆ.15ರವರೆಗೆ ಹಮ್ಮಿಕೊಳ್ಳಲಾಗಿದೆ. 1912ನೆ ಇಸವಿಯಿಂದ ಈವರೆಗೆ 207 ಫಲಪುಷ್ಪ ಪ್ರದರ್ಶನಗಳನ್ನು ಪೂರೈಸಿರುವ ಸದರಿ ಪ್ರದರ್ಶನ ಇದೀಗ 208ನೆಯ ಪ್ರದರ್ಶನದಲ್ಲಿ ಪುಷ್ಪಗಳು ನಳನಳಿಸುತ್ತಿವೆ. ಫಲಪುಷ್ಪ ಪ್ರದರ್ಶನವು ರಾಷ್ಟ್ರ ಮಟ್ಟದಲ್ಲಷ್ಟೇ ಅಲ್ಲದೆ ಪುಷ್ಪ ಪ್ರದರ್ಶನದ ಕ್ಷೇತ್ರದಲ್ಲಿ ಇದೊಂದು ಅಂತರರಾಷ್ಟ್ರೀಯ ದಾಖಲೆಯಾಗಿದೆ.

ಹಿಂದೆ ಈ ಪ್ರದರ್ಶನಗಳನ್ನು ಬೇಸಿಗೆ ಮತ್ತು ಚಳಿಗಾಲದ ಪ್ರದರ್ಶನಗಳೆಂದು ಕರೆಯಲಾಗುತ್ತಿದ್ದ ಈ ಪ್ರದರ್ಶನಗಳನ್ನು 1951ರಿಂದೀಚೆಗೆ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಪುಷ್ಪ ಪ್ರದರ್ಶನಗಳೆಂದು ಕರೆಯಲಾಗುತ್ತಿದೆ. ಎರಡು ರಾಷ್ಟ್ರೀಯ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಲಾಲ್‍ಬಾಗ್ ಪುಷ್ಪ ಪ್ರದರ್ಶನಗಳು ವಿಶ್ವವಿಖ್ಯಾತವಾಗಿದ್ದು , ಹಲವು ಪ್ರಭೇದಗಳ ಹೂವುಗಳು, ಹಣ್ಣುಗಳು, ತರಕಾರಿಗಳು ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಿ ಪ್ರದರ್ಶಿಸಲಾಗುತ್ತದೆ. ಇಂತಹ ಪ್ರದರ್ಶನ ಯಾವುದೇ ತೋಟಗಾರಿಕೆ ಪ್ರದರ್ಶನಗಳು ಸರಿಸಾಟಿ ಇಲ್ಲ.

ಪ್ರದರ್ಶನದಲ್ಲಿ ಇಕೆಬಾನ, ಪುಷ್ಪ ಭಾರತಿ ಕಲೆ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಥಾಯ್‍ಆರ್ಟ್, ಜಾನೂರು ಮತ್ತು ಅಲಂಕಾರಿಕ ತೋಟಗಳ ಸ್ಪರ್ಧೆಗಳು ಫಲಪುಷ್ಪ ಪ್ರದರ್ಶನದ ಅಂಗವಾಗಿ ನಡೆಯುತ್ತದೆ. ಫಲಪುಷ್ಪ ಪ್ರದರ್ಶನ ನಡೆಯುವ ಗಾಜಿನ ಮನೆಯನ್ನು ಸಂರಕ್ಷಣಾ ಹಾಗೂ ಪ್ರದರ್ಶನ ಭವನವನ್ನಾಗಿ 1889ನೆ ಇಸವಿಯಲ್ಲಿ ನಿರ್ಮಿಸಲಾಯಿತು. ಅಂದಿನಿಂದ ಗಾಜಿನ ಮನೆ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ.

87ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ವಾರ್ಷಿಕ ಹೂಗಳಿಂದ ಕೂಡಿದ ಈ ಪ್ರದರ್ಶನದಲ್ಲಿ ವಿಶೇಷವಾಗಿ ಹೂ ಬಿಡುವ ವಿವಿಧ ವರ್ಣಗಳ ಪಾಯಿನ್‍ಸಿಟಿಯಾ, ಗ್ಲಾಕ್ಸಿನಿಯಾ, ಸೇವಂತಿಗೆ ಹೊಸ ಬಗೆಯ ಡಾರ್ಫ್ ಇಕ್ಸೋರಾ, ಪೆರೆನಿಯಲ್ ಸನ್‍ಫ್ಲವರ್ , ಮೆಡಿನೆಲ್ಲಾ, ಅಂಥೋರಿಯಂ, ಆರ್ಕಿಡ್ಸ್, ವಿಂಕಾ ಬೊಗನ್ವಿಲ್ಲಾ ಇಂಪೇಕ್ಷನ್ಸ್, ಲಿಲ್ಲಿ, ಹೆಲಿಕೋನಿಯಾ, ಬೆಗೋನಿಯಾ, ಕಾರ್ನೆಷನ್, ಗುಲಾಬಿ, ಸೈಕ್ಲೊಮನ್, ಪೆಟೂನಿಯಾ, ಡ್ರೇಲಿಯಾ ಹಾಗೂ ಶೀತವಲಯದ ಹೂ ಗಿಡಗಳು ಪ್ರದರ್ಶನಗೊಳ್ಳುತ್ತವೆ. ಈ ಬಾರಿ ಗಾಜಿನ ಮನೆಯಲ್ಲಿ ನವದೆಹಲಿಯ ಇಂಡಿಯಾ ಗೇಟ್‍ನಲ್ಲಿರುವ ಯುದ್ಧ ಸ್ಮಾರಕ ಅಮರ ಜವಾನ್ ಜ್ಯೋತಿಯ ಮಾದರಿಯನ್ನು ಸೃಷ್ಟಿಸಲಾಗಿದೆ. ಇದರ ಹಿಂಬದಿಯಲ್ಲಿ ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆಯ ಧ್ವಜಗಳು ರಾರಾಜಿಸುತ್ತಿವೆ.

ಭಾರತೀಯ ಸೇನಾ ಪಡೆಗಳಿಗೆ ಪುಷ್ಪ ನಮನ ಗಾಜಿನ ಮನೆಯ ಹೃದಯ ಭಾಗದಲ್ಲಿ ರಾಷ್ಟ್ರ ರಕ್ಷಣೆಗೆ ಕಂಕಣಬದ್ಧರಾಗಿ ಹಗಲಿರುಳೆನ್ನದೆ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಡುವ ನಮ್ಮ ಸೈನಿಕರು, ಸಮಸ್ತ ಸೇನಾ ಪಡೆಗಳ ಸೇವಾ ಕೈಂಕರ್ಯ ವರ್ಣಾತೀತವಾದದ್ದು. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭವನ್ನು ಅತ್ಯಂತ ಗೌರವದಿಂದ ನೆನೆಯುವ ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಹಮ್ಮಿಕೊಂಡಿರುವ ಈ ಫಲ ಪುಷ್ಪ ಪ್ರದರ್ಶನದಲ್ಲಿ ಭಾರತೀಯ ಸೇನಾ ಪಡೆಗಳಿಗೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ವೀರ ಯೋಧರು ಹಾಗೂ ಸೇನಾ ಪಡೆ ಕಾರ್ಯವನ್ನು ನೆನೆಯುವ ಪ್ರಯತ್ನ ಮಾಡಲಾಗಿದೆ.

ಗಾಜಿನ ಮನೆಯ ಹೃದಯ ಭಾಗದ ಹಿನ್ನೆಲೆಯಲ್ಲಿ ಸಿಯಾಚಿನ್ ನೀರ್ಗಲ್ಲು ಸೃಷ್ಟಿಸಿ , ಅಲ್ಲಿನ ಹಿಮಪಾತ ಹಾಗೂ 40 ಡಿಗ್ರಿಯ ಕೊರೆಯುವ ಚಳಿಯಲ್ಲಿ ಸೈನಿಕರು ಕರ್ತವ್ಯ ನಿರತರಾಗಿರುವುದು. ಹಿಮ ಪರ್ವತದಿಂದ ಧುಮ್ಮಿಕ್ಕುವ ಜಲಧಾರೆ, ತಪ್ಪಲಿನಲ್ಲಿ ನೀರಿನ ಸರೋವರ, ಸಿಯಾನ್ ವಾಯುನೆಲೆ ಮೊದಲಾದವುಗಳನ್ನು ನೈಜತೆಗೆ ಹತ್ತಿರವಾಗುವಂತೆ ಸೃಷ್ಟಿಸಲಾಗಿದೆ. ಸಮರ ನೌಕೆ, ಜೆಟ್‍ಫೈಟರ್, ಯುದ್ಧ ವಿಮಾನಗಳು, ಟ್ಯಾಂಕರ್‍ಗಳು ಹಲವಾರು ಬಗೆಯ ಬಾಂಬರ್ ವಿಮಾನಗಳು ಮೊದಲಾದ ಮಾದರಿಗಳು ಆ ಪ್ರದೇಶವನ್ನು ಕಣ್ಣಿಗೆ ಕಟ್ಟಿ ಕೊಡುತ್ತದೆ.

ಪರಿಕಲ್ಪನಾ ಮಾದರಿಯನ್ನು ಖ್ಯಾತ ಕಲಾ ನಿರ್ದೇಶಕ ಅರುಣ್ ಸಾಗರ್‍ರವರ ನಿಕಟವರ್ತಿಟಿ.ಆರ್.ನಾರಾಯಣ, ಕುಕ್ರುತಿ ಕ್ರಿಯೇಷನ್ಸ್‍ರವರು ನಿರ್ಮಿಸಿದ್ದು , 9 ದಿನಗಳ ಕಾಲ 36 ಜನ ಪರಿಣಿತ ಕಲಾವಿದರ ಶ್ರಮದಿಂದ ಈ ಪರಿಕಲ್ಪನೆ ರೂಪುಗೊಂಡಿದೆ. ಭೂ ಸೇನೆಯ ಯುದ್ಧ ಟ್ಯಾಂಕರ್‍ಗಳು, ನೌಕಾ ಸಮರದ ಹಡಗು, ವಾಯು ಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್‍ಗಳು, ಫೈಟರ್ ಜೆಟ್‍ಗಳು ಹಿಮಪರ್ವತ, ಲೈನ್ ಆಫ್ ಕಂಟ್ರೋಲ್, ಭೂ ಮತ್ತು ವಾಯು ಸೇನೆ ನೆಲೆಗಳ ಮಾದರಿಗಳಲ್ಲಿ ಹಾಲೆಂಡ್ ಹಾಗೂ ಊಟಿಯ ಆಕರ್ಷಕ ಹೂ ಅರಳಿವೆ.

ಆಕರ್ಷಕ ಡೆಂಡ್ರೋಬಿಯಂ ಮತ್ತು ಮೊಖಾರ ಆರ್ಕಿಡ್‍ಗಳು, ಆಂಥೂರಿಯಂ ಹಲವು ವರ್ಣದ ಗುಲಾಬಿ ಹೂಗಳು, ಕಾರ್ನೆಷನ್, ಆಲ್‍ಸ್ಟ್ರೋಮೇರಿಯನ್ ಲಿಲ್ಲಿ, ಲಿಲಿಯಂ, ಸೈಮ್ ಕ್ರೈಸಾಂತಿಯಂ ವಿಶೇಷ ಬಗೆಯ ಎಲೆ ಜಾತಿಗಳಾದ ಲೆದರ್ ಲೀಫ್, ಡ್ರೆಸೀನಾ ಅಸ್ಟರಾಗಸ್‍ಗಳನ್ನು ಬಳಸಲಾಗುತ್ತಿದ್ದು , 15 ಜನ ನುರಿತ ಹೂ ಜೋಡಣೆಕಾರರು 3 ದಿವಸ ಕಾಲ ಹೂ ಜೋಡಿಸಿ ಈ ಪ್ರತಿಕೃತಿ ರಚಿಸಿದ್ದಾರೆ.  ಒಂದು ಬಾರಿಗೆ 40,000 ಹೂಗಳಂತೆ ಒಟ್ಟಾರೆ 3 ಬಾರಿ ಹೂಗಳ ಬದಲಾವಣೆ ಮಾಡಲಿದ್ದು , ಒಟ್ಟು 1,20,000 ಕ್ಕೂ ಹೆಚ್ಚು ಹೂಗಳನ್ನು ಈ ಉದ್ದೇಶಕ್ಕೆ ಬಳಸಲಾಗಿದೆ. ಗಾಜಿನ ಮನೆಯ ಕೇಂದ್ರ ಸ್ಥಾನದ ನಾಲ್ಕು ಮೂಲೆಗಳಲ್ಲಿ ಇಸ್ರೋ ನಿರ್ಮಿತ ಪಿಎಸ್‍ಎಲ್‍ವಿ, ಜಿಎಸ್‍ಎಲ್‍ವಿ ಉಪಗ್ರಹ ಉಡಾವಣಾ ಮಾದರಿಗಳು ಹಾಗೂ ಆಕಾಶ್ ಮತ್ತು ಬ್ರಹ್ಮೋಸ್ ಕ್ಷಿಪಣಿಗಳ ಮಾದರಿಯನ್ನು ಪ್ರದರ್ಶನಕ್ಕಿಡಲಾಗಿದೆ.

ಇದರೊಂದಿಗೆ ಕನ್ನಡ ಚಿತ್ರರಂಗದ 85 ವರ್ಷಗಳ ಮಹತ್ವ ಸಾಧನೆ ಗೌರವ ಪೂರ್ವಕವಾಗಿ ನೆನೆಯುವ ಪ್ರಯತ್ನ ಮಾಡಿದ್ದು , ಗಾಜಿನ ಮನೆಯ ಕೇಂದ್ರ ಭಾಗದ ಹಿಂದಿನ ಜಾಗದಲ್ಲಿ ಹಳೆಯ ಕಾಲದ ಉದ್ದದ ಫ್ಲೋರಲ್ ರೀಲ್ ಮಾದರಿ, ಫ್ಲೋರಲ್ ಸಿನಿಮಾ ಕ್ಲಾಪ್‍ಬೋರ್ಡ್ ಹಾಗೂ ಫ್ಲೋರಲ್ ಕ್ಯಾಮೆರಾ ಮಾದರಿಗಳನ್ನು ಜೊತೆಗೆ ಕನ್ನಡ ಸಿನಿಮಾ ಯಾನದ ಹಲವು ಮಹತ್ತರ ಮೈಲಿಗಲ್ಲುಗಳನ್ನು ಹೂಗಳಲ್ಲಿ ಬಿಂಬಿಸಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾರ್ಗದರ್ಶನದಲ್ಲಿ ಈ ಪರಿಕಲ್ಪನೆ ಸಾಕಾರಗೊಂಡಿದೆ.  1912ನೆ ಇಸವಿಯಿಂದ ಈವರೆಗೆ 207 ಫಲಪುಷ್ಪ ಪ್ರದರ್ಶನಗಳನ್ನು ಪೂರೈಸಿರುವ ಸದರಿ ಪ್ರದರ್ಶನ ಇದೀಗ 208ನೆಯ ಪ್ರದರ್ಶನದಲ್ಲಿ ಪುಷ್ಪಗಳು ನಳನಳಿಸುತ್ತಿವೆ. ಫಲಪುಷ್ಪ ಪ್ರದರ್ಶನವು ರಾಷ್ಟ್ರ ಮಟ್ಟದಲ್ಲಷ್ಟೇ ಅಲ್ಲದೆ ಪುಷ್ಪ ಪ್ರದರ್ಶನದ ಕ್ಷೇತ್ರದಲ್ಲಿ ಇದೊಂದು ಅಂತರರಾಷ್ಟ್ರೀಯ ದಾಖಲೆಯಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin