ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಈ ಬಾರಿ ‘ವಿವೇಕ ಪುಷ್ಪ ಪ್ರದರ್ಶನ-2020’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14-ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಈ ಬಾರಿ ಲಾಲ್‍ಬಾಗ್ ಗಾಜಿನ ಮನೆಯಲ್ಲಿ ಗಣರಾಜ್ಯೋತ್ಸವದ ವಿಶೇಷ ಸಂದರ್ಭವಾಗಿ ವಿವೇಕ ಪುಷ್ಪ ಪ್ರದರ್ಶನ-2020 ಆಯೋಜಿಸುವ ಮೂಲಕ ವಿವೇಕಾನಂದರಿಗೆ ಪುಷ್ಪ ನಮನ ಸಲ್ಲಿಸಲಾಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ವೆಂಕಟೇಶ್ ಮಾತನಾಡಿ, ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘದ ವತಿಯಿಂದ ಜ.17ರಂದು ಮಧ್ಯಾಹ್ನ 12 ಗಂಟೆಗೆ ವಿವೇಕ ಪುಷ್ಪ ಪ್ರದರ್ಶನ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದು 211ನೇ ಫಲಪುಷ್ಪ ಪ್ರದರ್ಶನವಾಗಿದ್ದು, ಈ ಬಾರಿ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಬಸವನಗುಡಿ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಶ್ರೀ ಹರ್ಷಾನಂದ ಅವರು, ತೋಟಗಾರಿಕೆ ಇಲಾಖೆ ಸಚಿವ ವಿ.ಸೋಮಣ್ಣ, ಭಾಗವಹಿಸುವರು.

ಚಿಕ್ಕಪೇಟೆ ಶಾಸಕ ಉದಯ್ ಬಿ.ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ತೇಜಸ್ವಿ ಸೂರ್ಯ, ಮೇಯರ್ ಎಂ.ಗೌತಮ್‍ಕುಮಾರ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಬಿಬಿಎಂಪಿ ಸದಸ್ಯೆ ವಾಣಿ ವಿ.ರಾವ್, ಅಪರ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಬಿ.ವೆಂಕಟೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮೈಸೂರು ಉದ್ಯಾನ ಕಲಾಸಂಘದ ಉಪಾಧ್ಯಕ್ಷ ಬಿ.ಆರ್.ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು.

Facebook Comments