ಸುಪ್ರೀಂ ಕೋರ್ಟ್ ಸಮಿತಿಯಿಂದ ರೈತರು ನ್ಯಾಯ ನಿರೀಕ್ಷಿಸಬಾರದು : ಲಲ್ಲೂ

ಈ ಸುದ್ದಿಯನ್ನು ಶೇರ್ ಮಾಡಿ

ಮಥುರಾ (ಯುಪಿ), ಜ.14- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಅವಿರತವಾಗಿ 50 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನ್ಯಾಯ ದೊರಕಿಸಿಕೊಡಲು ಸರ್ವೋಚ್ಛ ನ್ಯಾಯಾಲಯ ತಜ್ಞರ ಸಮಿತಿ ರಚಿಸಿದೆ.  ಆದರೆ, ನಾಲ್ಕು ತಜ್ಞರ ಸಮಿತಿಯಿಂದ ರೈತರು ನ್ಯಾಯ ನಿರೀಕ್ಷಿಸಲಾಗದು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೈತರು ನಡೆಸುತ್ತಿರುವ ಆಂದೋಲನ ಪರವಾಗಿ ರೈತ ಸಂಘಟನೆ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ದ್ವೀಪಕ್ಷಿಯ ನ್ಯಾಯಪೀಠ ಮೂರು ಕಾನೂನುಗಳಿಗೆ ತಡೆ ನೀಡಿ ತಜ್ಞರ ಸಮಿತಿ ನೇಮಿಸಲು ಆದೇಶಿಸಿದೆ. ಸಮಿತಿ ಎರಡು ತಿಂಗಳಲ್ಲಿ ಕೋರ್ಟ್‍ಗೆ ವರದಿ ಸಲ್ಲಿಸಬೇಕಿದೆ.

ಆದರೆ, ನಾಲ್ಕು ಮಂದಿಯ ತಜ್ಞರ ಸಮಿತಿ ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯಂತಿದೆ. ಯಾಕೆಂದರೆ ಈ ನಾಲ್ವರು ಎಂಎಸ್‍ಪಿ ಸೇರಿದಂತೆ ಮೂರು ಕಾನೂನುಗಳ ಪರವಾಗಿ ಬಹಿರಂಗವಾಗಿ ಮಾತನಾಡಿದ್ದಾರೆ. ಆದ್ದರಿಂದ ಸಮಿತಿಯಿಂದ ರೈತರು ಸೂಕ್ತ ನ್ಯಾಯ ನಿರೀಕ್ಷಿಸಲಾಗದು.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರ್ಕಾರ ಮತ್ತು ರೈತರ ಬೇಡಿಕೆಗಳ ನಡುವೆ ಅಪೆಕ್ಸ್ ಕೋರ್ಟ್ ಮಧ್ಯಸ್ಥಿಕೆ ವಹಿಸಿರುವುದು ಕಾನೂನುಗಳನ್ನು ರದ್ದುಗೊಳಿಸಬಹುದು ಎಂದು ರೈತ ಸಂಘಟನೆಗಳು ನಿರೀಕ್ಷಿಸಿದ್ದರು. ಅದು ಆಗದೆ, ಸುಪ್ರೀಂ ಕೋರ್ಟ್ ಕೇವಲ ಅವುಗಳ ಅನುಷ್ಠಾನವನ್ನು ಸ್ಥಗಿತಗೊಳಿಸಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೆ ಅವರು ತೃಪ್ತರಾಗುವುದಿಲ್ಲ ಎಂದು ಲಲ್ಲೂ ಹೇಳಿದ್ದಾರೆ.

Facebook Comments