ಐಆರ್‌ಸಿಟಿಸಿ ಹಗರಣದಲ್ಲಿ ಲಾಲು, ಪತ್ನಿ, ಪುತ್ರನಿಗೆ ಕೋರ್ಟ್ ಸಮನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Lalu--01

ನವದೆಹಲಿ, ಜು.30-ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‍ಸಿಟಿಸಿ) ಹಗರಣಕ್ಕೆ ಸಂಬಂಧಿಸಿದಂತೆ ಆರ್‍ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಪುತ್ರ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಹಾಗೂ ಇತರರಿಗೆ ದೆಹಲಿಯ ನ್ಯಾಯಾಲಯವೊಂದು ಇಂದು ಸಮನ್ಸ್ ಜಾರಿಗೊಳಿಸಿದೆ.

ಇದರೊಂದಿಗೆ ಮತ್ತೊಂದು ಕಾನೂನು ಕಂಟಕವೊಂದು ಲಾಲು ಕುಟುಂಬಕ್ಕೆ ಎದುರಾದಂತಾಗಿದೆ.   ಐಆರ್‍ಸಿಟಿಸಿಗೆ ಸೇರಿದ ಎರಡು ಹೋಟೆಲ್‍ಗಳಿಗೆ ಕಾರ್ಯನಿರ್ವಹಣೆ ಗುತ್ತಿಗೆ ಮಂಜೂರು ಮಾಡುವಲ್ಲಿ ಅಕ್ರಮಗಳು ನಡೆದಿದೆ ಎನ್ನಲಾದ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಗಸ್ಟ್ 31ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಲಾಲು, ರಾಬ್ರಿ, ತೇಜಸ್ವಿ ಹಾಗೂ ಮತ್ತಿತರಿಗೆ ವಿಶೇಷ ನ್ಯಾಯಾಧೀಶರಾದ ಅರವಿಂದ್ ಕುಮಾರ್ ಇಂದು ಸೂಚನೆ ನೀಡಿದ್ದಾರೆ.

ಏಪ್ರಿಲ್ 16ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪಣೆ ಸಲ್ಲಿಸಿರುವ ಕೇಂದ್ರೀಯ ತನಿಖಾ ದಳ-ಸಿಬಿಐ, ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇರುವುದಾಗಿ ಹೇಳಿದೆ. ಲಾಲು ಮತ್ತು ಅವರ ಕುಟುಂಬದ ಸದಸ್ಯರಲ್ಲದೇ, ಕೇಂದ್ರ ಮಾಜಿ ಸಚಿವ ಪ್ರೇಮ್ ಚಂದ್ ಗುಪ್ತಾ ಮತ್ತು ಅವರ ಪತ್ನಿ ಸರಿಯಾ ಗುಪ್ತಾ, ಐಆರ್‍ಸಿಟಿಸಿ ಆಗಿನ ಗ್ರೂಪ್ ಜನರಲ್ ಮ್ಯಾನೇಜರ್ ಬಿ.ಕೆ.ಅಗರ್‍ವಾಲ್, ಸಂಸ್ಥೆಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಗೋಯೆಲ್ ಹಾಗೂ ಐಆರ್‍ಸಿಟಿಸಿ ಮಾಜಿ ನಿರ್ದೇಶಕ ರಾಕೇಶ್ ಸಕ್ಸೇನಾ ಅವರ ಹೆಸರುಗಳು ಚಾರ್ಜ್‍ಶೀಟ್‍ನಲ್ಲಿದೆ. ಅಲ್ಲದೇ ಐಆರ್‍ಸಿಟಿಸಿ ಮಾಜಿ ಗ್ರೂಪ್ ಜನರಲ್ ಮ್ಯಾನೇಜರ್‍ಗಳಾದ ವಿ.ಕೆ.ಆಸ್ತಾನ ಮತ್ತು ಆರ್.ಕೆ.ಗೋಯೆಲ್ ಹಾಗೂ ಸುಜಾತ ಹೋಟೆಲ್ಸ್‍ನ ನಿರ್ದೇಶಕರೂ ಆದ ಚಾಣಕ್ಯ ಹೋಟೆಲ್‍ನ ಮಾಲೀಕರಾದ ವಿನಯ್ ಕೋಚರ್ ಮತ್ತು ವಿಜಯ್ ಕೋಚರ್ ಅವರ ಹೆಸರುಗಳೂ ಕೂಡ ದೋಷಾರೋಪ ಪಟ್ಟಿಯಲ್ಲಿದೆ.

Facebook Comments

Sri Raghav

Admin