48 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ

ಈ ಸುದ್ದಿಯನ್ನು ಶೇರ್ ಮಾಡಿ

ಚಳ್ಳಕೆರೆ, ಫೆ.24-ಶೀಘ್ರದಲ್ಲೇ ತಾಲ್ಲೂಕಿನ ಸುಮಾರು 48 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.  ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 281 ನೇ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಂಬಾಣಿ ಸಮುದಾಯ ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರ ಸೇರಿದಂತೆ, ಇತರೆ ಕ್ಷೇತ್ರಗಳಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಹಿನ್ನಡೆ ಅನುಭವಿಸುತ್ತಿದೆ.

ಜನಾಂಗದ ಅಭಿವೃದ್ಧಿಗೆ ಲಂಬಾಣಿ ಸಮುದಾಯ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಬೇಕಿದೆ ಎಂದರು.  ಸಮುದಾಯದ ಜನರು ಸಂಪ್ರದಾಯಗಳ ಜೊತೆಗೆ, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಕೊಡಿಸುವ ಮೂಲಕ, ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಈ ಕ್ಷೇತ್ರದಲ್ಲಿ ನಾನು ಎರಡನೇ ಬಾರಿ ಶಾಸಕನಾಗಲು ಲಂಬಾಣಿ ಸಮುದಾಯ ಕೂಡ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ನಂತರ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್ ಮಾತನಾಡಿ, ಸಂತ ಸೇವಾಲಾಲ್ ಈ ಸಮುದಾಯಕ್ಕೆ ಶಕ್ತಿ ಹಾಗೂ ಚೈತನ್ಯವನ್ನು ತುಂಬಿದ ಮಹಾಪುರುಷ. 17 ನೇ ಶತಮಾನದಲ್ಲಿಯೇ ಇವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ, ಇವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಲು ಈ ಜಯಂತಿಯನ್ನು ಸರ್ಕಾರ ಆಚರಣೆಗೆ ತಂದಿದೆ. ಸಮುದಾಯದ ಜನರು ಇವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ಎಸ್. ರಾಜಣ್ಣ ಲಂಬಾಣಿ ಸಮುದಾಯದ ಕುರಿತು ಉಪನ್ಯಾಸ ನೀಡಿದರು. ಸಿಬಾರದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿ, ಕುರುಡಿಹಳ್ಳಿ ಶಿವಸಾಧು ಸ್ವಾಮೀಜಿ, ಸರಿಗಮಪ ಗಾಯಕ ಹನುಮಂತ, ಜಿ.ಪಂ. ಸದಸ್ಯರಾದ ಬಿ. ನಾಗೇಂದ್ರ ನಾಯ್ಕ, ಬಿಪಿ ಪ್ರಕಾಶ್ ಮೂರ್ತಿ, ತಾ. ಪಂ.ಅಧ್ಯಕ್ಷೆ ವಿಜಯಲಕ್ಷ್ಮಿ, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಗೀತಾ ಬಾಯಿ, ಕಂದಿಕೆರೆ ಸುರೇಶ್ ಬಾಬು, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ, ಜಯಲಕ್ಷ್ಮಿ, ಬಿ.ಟಿ. ರಮೇಶ್ ಗೌಡ ಸೇರಿದಂತೆ, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Facebook Comments