ಪ್ರಭಾವಿ ರಾಜಕಾರಣಿಗೆ ಸೇರಿದ ಅನಧಿಕೃತ ಬಡಾವಣೆ ತೆರವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14- ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ ರಿಯಲ್ ಎಸ್ಟೇಟ್ ಸಂಸ್ಥೆ ನಿರ್ಮಿಸಿದ್ದ ಅನಧಿಕೃತ ಬಡಾವಣೆಯನ್ನು ಬೆಂಗಳೂರು ಜಿಲ್ಲಾಡಳಿತ ಇಂದು ತೆರವುಗೊಳಿಸಿದ್ದು, 100 ಕೋಟಿ ರೂಪಾಯಿ ಮೊತ್ತದ ಭೂಮಿಯನ್ನು ವಶ ಪಡಿಸಿಕೊಂಡಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿ ಮೈಲಸಂದ್ರ ಗ್ರಾಮದಲ್ಲಿ ಒಬ್ಬತ್ತು ಸರ್ವೇ ನಂಬರ್‍ಗಳಲ್ಲಿ ಸುಮಾರು 7.28 ಎಕರೆ ಗೋಮಾಳ ಭೂಮಿಯಲ್ಲಿ ವಿಂಗಡಿಸಿದ್ದ ನಿವೇಶನಗಳನ್ನು ತೆರವುಗೊಳಿಸಲಾಗಿದೆ.

ಗ್ರಾಮದ ಸರ್ವೇ ನಂಬರ್ 38/1ರಲ್ಲಿ 0.17 ಕುಂಟೆ, 38/2ರಲ್ಲಿ 1.05 ಎಕರೆ, 34/1ರಲ್ಲಿ 4.16 ಎಕರೆ, 34/2ರಲ್ಲಿ 0.24 ಕುಂಟೆ, 35ರಲ್ಲಿ 0.25 ಕುಂಟೆ, 39/1, 39/2ರಲ್ಲಿ ತಲಾ 0.8 ಕುಂಟೆ, 39/3, 39/4 ತಲಾ 16 ಕುಂಟೆ ಗೋಮಾಳದ ಭೂಮಿಯಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಲಾಗಿತ್ತು. ಇದರ ಮೌಲ್ಯ ಸುಮಾರು 100 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.

ಈ ಪ್ರದೇಶದಲ್ಲಿ ರೈತರ ಕೃಷಿ ಭೂಮಿ ಕೂಡಾ ಇದೆ. ಕಂದಾಯ ಭೂಮಿಯನ್ನು ಭೂ ಪರಿವರ್ತನೆ ಮಾಡದೆ, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯದೆ ನಿವೇಶನಗಳನ್ನಾಗಿ ವಿಂಗಡಿಸಲಾಗಿತ್ತು. ತಾಂತ್ರಿಕ ಸಮಸ್ಯೆ ಗೊತ್ತಿಲ್ಲದೆ ಸಾರ್ವಜನಿಕರು ನಿವೇಶನಗಳನ್ನು ಖರೀದಿಸುತ್ತಿದ್ದರು.

ಕಂದಾಯ ಭೂಮಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಇಲ್ಲಿ ಮನೆ ನಿರ್ಮಿಸಲು ಸಾಧ್ಯವಿರಲಿಲ್ಲ. ಭೂ ಪರಿವರ್ತನೆಯಾಗದೆ ಇರುವುದರಿಂದ ಅನಧಿಕೃತ ಬಡಾವಣೆ ಎಂದು ಪರಿಗಣಿಸಲಾಗುತ್ತಿತ್ತು. ಸಾರ್ವಜನಿಕರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಹಣ, ಸಮಯ ವ್ಯಯ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂದು ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಕಾರ್ಯಚರಣೆ ನಡೆಸಿ, ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಿದೆ. ಇಲ್ಲಿದ್ದ ಸರ್ಕಾರಿ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವುದು, ನಿವೇಶನಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಯಾಮಾರಿಸುವುದನ್ನೇ ವೃತ್ತಿ ಮಾಡಿಕೊಂಡಿರುವ ಪ್ರಭಾವಿ ರಾಜಕಾರಣಿಗೆ ಸೇರಿದ ಜಾಗದಲ್ಲಿ ಇಂದು ಜಿಲ್ಲಾಡಳಿತ ಇಂದು ಕಾರ್ಯ ನಡೆಸಿದೆ. ಈ ಹಿಂದೆ ಕಾರ್ಯಚರಣೆಗೆ ಮುಂದಾದಾಗ ಸ್ಥಳಿಯವಾಗಿ ಜೆಸಿಬಿಗಳು ಸಿಗದಂತೆ ಮಾಡಲಾಗಿತ್ತು.

ಬೇರೆ ಕಡೆಯಿಂದ ಜೆಸಿಬಿಗಳನ್ನು ಕರೆ ತಂದರೆ ಅವುಗಳಿಗೆ ಬಂಕ್‍ಗಳಲ್ಲಿ ಡಿಸೇಲ್ ಕೊಡದೆ ಅಸಹಕಾರ ನೀಡಲಾಗಿತ್ತು. ಹಾಗಾಗಿ ಇಂದು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು, ಹೊರಗಡೆಯಿಂದ 8 ಜೆಸಿಬಿಗಳನ್ನು ತಂದು ಕಾರ್ಯಚರಣೆ ನಡೆಸಲಾಗಿದೆ.

ಅದನ್ನು ತಡೆಯಲು ಕೊನೆಯ ಕ್ಷಣದವರೆಗೂ ಭಾರೀ ಒತ್ತಡ ತರಲಾಗಿತ್ತು. ಆದರೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಉಪವಿಭಾಗಾಧಿಕಾರಿ ಡಾ.ಎಂ.ಜಿ.ಶಿವಣ್ಣ, ತಹಸೀಲ್ದಾರ್ ಶಿವಪ್ಪ ಲಮಾಣಿ ಮತ್ತಿತರರು ಯಾವುದಕ್ಕೆ ತಲೆ ಕಡೆಸಿಕೊಳ್ಳದೆ ಕಾರ್ಯಾಚರಣೆ ನಡೆಸಿದರು.

Facebook Comments