2 ದಿನದಲ್ಲಿ ಒತ್ತುವರಿಯಾಗಿದ್ದ 50 ಕೋಟಿ ರೂ. ಮೊತ್ತದ ಆಸ್ತಿ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.6- ಕೊರೊನಾ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷಗಳಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಶುರುವಾಗಿದ್ದು, ಕಳೆದ ಎರಡು ದಿನಗಳಿಂದ ಸುಮಾರು 50 ಕೋಟಿ ರೂ. ಮೊತ್ತದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ನೈಸ್ ರಸ್ತೆ ಬಳಿ ಅಗರ ಗ್ರಾಮದ ಸರ್ವೆ ನಂ.73ರಲ್ಲಿ ಎರಡು ಎಕರೆ , ಸರ್ವೆ ನಂ.31ರಲ್ಲಿ ಒಂದು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಈ ಭೂಮಿಯ ಪಕ್ಕದಲ್ಲೇ ಖಾಸಗಿ ಲೇ ಔಟ್ ಇದ್ದು , ಗುಡ್ಡದ ಮಾದರಿಯಲ್ಲಿದ್ದ ಸರ್ಕಾರಿ ಭೂಮಿಯನ್ನು ಸಮತಟ್ಟು ಮಾಡಿ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಅವನ್ನು ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಿ ಮಾರಾಟ ಮಾಡುವ ಪ್ರಯತ್ನ ಕೂಡ ನಡೆದಿದೆ ಎಂದು ಸಾರ್ವಜನಿಕರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಉಪ ವಿಭಾಗಾಕಾರಿ ಎಂ.ಜಿ.ಶಿವಣ್ಣ , ದಕ್ಷಿಣ ತಾಲ್ಲೂಕು ತಹಸೀಲ್ದಾರ್ ಶಿವಪ್ಪ ಲಮಾಣಿ ಸ್ಥಳಕ್ಕೆ ಭೇಟಿ ನೀಡಿದರು. ಪರಿಶೀಲನೆ ನಡೆಸಿದಾಗ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿರುವ ಪ್ರಯತ್ನ ಖಚಿತವಾಗಿದೆ.

ಅದನ್ನು ತೆರವುಗೊಳಿಸಲು ಮುಂದಾದಾಗ ಸ್ಥಳೀಯರೊಬ್ಬರು ಬಂದಿದ್ದು , ತಾವು ಕೃಷಿಕರು ಈ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇವೆ. ಇದು ನಮಗೆ ಸೇರಿದ ಜಮೀನು ಎಂದು ವಾದಿಸಿದ್ದಾರೆ. ಆದರೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಲು ಅವರು ವಿಫಲರಾಗಿದ್ದಾರೆ.

ಹೀಗಾಗಿ ಒತ್ತುವರಿ ಭೂಮಿಯನ್ನು ಅಕಾರಿಗಳು ತೆರವುಗೊಳಿಸಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು 30 ರಿಂದ 40 ಕೋಟಿ ಎಂದು ಹೇಳಲಾಗಿದೆ. ಈ ಮಧ್ಯೆ ರಾಜರಾಜೇಶ್ವರಿ ನಗರಕ್ಕೆ ಹೊಂದಿಕೊಂಡಂತಿರುವ ಚನ್ನಸಂದ್ರದ ಸರ್ಕಾರಿ ಶಾಲೆಯ ಮೈದಾನವನ್ನು ಸುಮಾರು 10 ಸಾವಿರ ಅಡಿಯಷ್ಟು ಒತ್ತುವರಿ ಮಾಡಿಕೊಂಡು ವಾಣಿಜ್ಯ ಸಂಕೀರ್ಣ ನಿರ್ಮಿಸುವ ಪ್ರಯತ್ನ ನಡೆದಿತ್ತು.

ಸ್ಥಳೀಯ ಪ್ರಭಾವಿ ನಾಯಕರು ಈ ಒತ್ತುವರಿ ಮಾಡಿಕೊಂಡಿದ್ದು, ಅಕಾರಿಗಳು ಅದನ್ನು ತೆರವುಗೊಳಿಸಲು ಮುಂದಾದಾಗ ಭಾರೀ ಪ್ರತಿರೋಧ ವ್ಯಕ್ತವಾಗಿದೆ. ಹೀಗಾಗಿ ನಿನ್ನೆ ರಾತ್ರಿ ಏಕಾಏಕಿ ಜೆಸಿಬಿಯೊಂದಿಗೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ತಾತ್ಕಾಲಿಕ ಶೆಡ್‍ಗಳನ್ನು ತೆರವುಗೊಳಿಸಿದ್ದಾರೆ. ಇದರ ಮೌಲ್ಯ ಸುಮಾರು 15 ರಿಂದ 20 ಕೋಟಿ ಎಂದು ಅಂದಾಜಿಸಲಾಗಿದೆ.

ಒಂದು ವರ್ಷದ ಬಳಿಕ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಬೆಂಗಳೂರಿನ ದಕ್ಷಿಣ , ಯಲಹಂಕ ಮತ್ತು ಪೂರ್ವ ತಾಲ್ಲೂಕುಗಳಲ್ಲಿ ಏಕ ಕಾಲಕ್ಕೆ ನಡೆಯುತ್ತಿದೆ. ಕೆ.ಆರ್.ಪುರದಲ್ಲಿ ಕೆಲವು ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ. ಯಲಹಂಕ ತಾಲ್ಲೂಕಿನಲ್ಲೂ ಬಿರುಸಿನ ಕಾರ್ಯಾಚರಣೆಯನ್ನು ಸ್ಥಳೀಯ ತಹಸೀಲ್ದಾರರು ಕೈಗೆತ್ತಿಕೊಂಡಿದ್ದಾರೆ.

ವಾರ ಪೂರ್ತಿ ನಡೆದ ತೆರವು ಕಾರ್ಯಾಚರಣೆಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ ಶನಿವಾರದಂದು ಸರ್ಕಾರಕ್ಕೆ ವರದಿ ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Facebook Comments

Sri Raghav

Admin