ಹೂ ಮಾರುವ ಬಾಲಕಿಗೆ ಲ್ಯಾಪ್‍ಟ್ಯಾಪ್ ಉಡುಗೊರೆ ನೀಡಿದ ಗೌರವ್‍ ಗುಪ್ತಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.29- ಮಧ್ಯಾಹ್ನದವರೆಗೆ ದೇವಾಲಯದ ಮುಂದೆ ಹೂ ಮಾರಾಟ ಮಾಡಿ ನಂತರ ಆನ್‍ಲೈನ್ ಕ್ಲಾಸ್‍ನಲ್ಲಿ ಪಾಠ ಕೇಳಿಸಿಕೊಂಡು ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಆಸಕ್ತಳಾಗಿರುವ ಬಡ ವಿದ್ಯಾರ್ಥಿನಿಗೆ ತಮ್ಮ ಸ್ವಂತ ಹಣದಿಂದ ಲ್ಯಾಪ್‍ಟ್ಯಾಪ್ ಕೊಡಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತಾ ತೀರ್ಮಾನಿಸಿದ್ದಾರೆ.

ನೇಕಾರಿಕೆ ಮಾಡುವ ಅಪ್ಪ, ಹೂ ಮಾರುವ ಅಮ್ಮ ಮತ್ತು ಸಹೋದರರು, ಇದರ ಮಧ್ಯೆ ತಾನೂ ಹೂ ಮಾರಿ, ಇದರ ಜತೆಗೆ ಕೊರೊನಾ ಸಂಕಷ್ಟದಲ್ಲೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ತಯಾರಾಗಿರುವ ಆದಿಶಕ್ತಿ ದೇವಾಲಯದ ಮುಂದೆ ಹೂ ಮಾರುವ ಬಾಲಕಿ ಬನಶಂಕರಿ ಬಗ್ಗೆ ತಿಳಿದ ಆಯುಕ್ತರು ತಾವೇ ಸ್ವತಃ ದೇವಾಲಯದ ಬಳಿಗೆ ತೆರಳಿ ಆಕೆಗೆ ನೆರವಿನ ಭರವಸೆ ನೀಡಿದರು.

ಇಡೀ ಕುಟುಂಬ ಬದುಕು ಕಟ್ಟಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ, ಕುಟುಂಬ ಸದಸ್ಯರಿಗೆ ನೆರವು ನೀಡಿ, ಕಳೆದ ಐದು ವರ್ಷಗಳಿಂದ ಕಷ್ಟಪಟ್ಟು ಓದಿ, ಇದೀಗ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲಾಗುವುದು ಎಂಬ ಮಾಹಿತಿ ದೊರೆಯುತ್ತಿದ್ದಂತೆ ಫುಲ್ ಖುಷಿಯಾಗಿ ಪರೀಕ್ಷೆಗೆ ತಯಾರಾಗುತ್ತಿರುವ ಬನಶಂಕರಿ ಬಗ್ಗೆ ತಿಳಿದು ಆಯುಕ್ತರು ದೇವಾಲಯಕ್ಕೆ ಇಂದು ಭೇಟಿ ನೀಡಿದ್ದರು.

ಬಾಲಕಿ ಬಳಿಗೆ ಬಂದ ಆಯುಕ್ತರು ಮಾಸ್ಕ್ ಹಾಕುವುದನ್ನು ಮರೆಯಬೇಡ, ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಯಾವ ರೀತಿ ತಯಾರಿ ನಡೆಸಿದ್ದೀಯ ಎಂದು ಕೇಳಿ, ಚೆನ್ನಾಗಿ ಓದಿ ವಿದ್ಯಾವಂತಳಾಗುವಂತೆ ತಿಳಿ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಧಾರಣ ಹಿನ್ನೆಲೆ ಕುಟುಂಬದ ಬಾಲಕಿಯ ಉತ್ಸಾಹ ಕಂಡು ನನಗೆ ನನ್ನ ಬಾಲ್ಯದ ನೆನಪುಗಳು ಮರುಕಳಿಸಿದೆ. ಕಷ್ಟದಲ್ಲಿ ಓದಿ ಮುಂದೆ ಬರಬೇಕು ಎಂದು ಬಾಲಕಿಗೆ ತಿಳಿ ಹೇಳಿ, ಆಕೆಯ ಆನ್‍ಲೈನ್ ಕ್ಲಾಸಿಗೆ ಸಹಕಾರಿಯಾಗಲಿ ಎಂದು ನಾನು ನನ್ನ ಸ್ವಂತ ಹಣದಿಂದ ಲ್ಯಾಪ್‍ಟ್ಯಾಪ್ ಕೊಡಿಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

Facebook Comments