3 ಲಷ್ಕರ್ ಉಗ್ರರ ಬಂಧನ, ಪಾಕಿಸ್ತಾನ ಡ್ರೋನ್ ಎಸೆದ ಶಸ್ತ್ರಾಸ್ತ್ರಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಸೆ.20-ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದಲ್ಲಿ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳಿಂದ ನಡೆಯಬಹುದಾಗಿದ್ದ ಮತ್ತೊಂದು ವಿಧ್ವಂಸಕ ಕೃತ್ಯವೊಂದು ಪೊಲೀಸರು ಮತ್ತು ಯೋಧರ ಜಂಟಿ ಕಾರ್ಯಾಚರಣೆಯಿಂದ ತಪ್ಪಿದೆ.

ಈ ಸಂಬಂಧ ಪಾಕಿಸ್ತಾನ ನಿಷೇಧಿತ ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್-ಎ-ತೈಬಾ(ಎಲ್‍ಇಟಿ)ದ ಮೂವರು ಭಯೋತ್ಪಾದಕರನ್ನು ಕಾಶ್ಮೀರಿ ಕಣಿವೆಯ ರಜೌರಿ ವಲಯದಲ್ಲಿ ಬಂಧಿಸಲಾಗಿದೆ. ಅಲ್ಲದೇ ಪಾಕಿಸ್ತಾನ ಡ್ರೋಣ್ ಭಾರತೀಯ ಗಡಿ ಪ್ರದೇಶದ ಒಳಗೆ ಎಸೆದಿದ್ದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮುವಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ದಿಲ್‍ಭಾಗ್ ಸಿಂಗ್, ರಜೌರಿ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಡ್ರೋಣ್ ಸ್ಪೋಟಕಗಳು ಮತ್ತು ಪಿಸ್ತೂಲ್-ಮ್ಯಾಗಝೈನ್‍ಗಳನ್ನು ಎಸೆದು ಪರಾರಿಯಾಗಿತ್ತು. ಇವುಗಳನ್ನು ಎತ್ತಿಕೊಳ್ಳಲು ಬಂದಿದ್ದ ಕಾಶ್ಮೀರದ ಮೂವರು ಲಷ್ಕರ್ ಉಗ್ರಗಾಮಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ರಜೌರಿ ಪೊಲೀಸರು ಮತ್ತು 38 ರಾಷ್ಟ್ರೀಯ ರೈಫಲ್ ಯೋಧರು ಸಮನ್ವಯದ ಜಂಟಿ ಕಾರ್ಯಾಚರಣೆಯಿಂದಾಗಿ ಮುಂದೆ ಸಂಭವಿಸಬಹುದಾಗಿದ್ದ ವಿಧ್ವಂಸಕ ಕೃತ್ಯ ತಪ್ಪಿದಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಜಮ್ಮು ವಲಯದ ಐಜಿಪಿ ಮುಕೇಶ್ ಸಿಂಗ್ ಹೇಳಿದರು.

ಇದು ಕಳೆದ ಒಂದು ವಾರದಲ್ಲಿ ಅವಳಿ ನಗರಗಳಾದ ರಜೌರಿ ಮತ್ತು ಪೂಂಚ್ ಜಿಲ್ಲೆಯಲ್ಲಿ ನಡೆದ ಎರಡನೇ ಮಹತ್ವದ ಕಾರ್ಯಾಚರಣೆಯಾಗಿದೆ. ಪೂಂಚ್‍ನಲ್ಲಿ ಭದ್ರತಾಪಡೆಗಳು ಉಗ್ರರ ಅಡುಗುದಾಣವನ್ನು ಭೇದಿಸಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.

Facebook Comments