ತಮಿಳುನಾಡಿನಲ್ಲಿ ಇಬ್ಬರು ಶಂಕಿತ ಎಲ್ಇಟಿ ಉಗ್ರರ ಸೆರೆ..!
ಚೆನ್ನೈ, ಆ.25- ತಮಿಳುನಾಡಿಗೆ ಪಾಕಿಸ್ತಾನದ ಲಷ್ಕರ್-ಎ-ತೈಬಾ(ಎಲ್ಇಟಿ) ಉಗ್ರಗಾಮಿ ಸಂಘಟನೆಯ ಆರು ಭಯೋತ್ಪಾದಕರು ನುಸುಳಿರುವ ಆತಂಕದ ನಡುವೆ ಇಬ್ಬರು ಶಂಕಿತ ಉಗ್ರರನ್ನು ನಿನ್ನೆ ರಾತ್ರಿ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಆರೋಪಿಗಳಿಂದ ಮಹತ್ವದ ಕೆಲ ಸಂಗತಿಗಳು ಬೆಳಕಿಗೆ ಬಂದಿದ್ದು, ವಿಧ್ವಂಸಕ ಕೃತ್ಯಕ್ಕೆ ಪೂರ್ವಭಾವಿಯಾಗಿ ನಡೆಸುತ್ತಿದ್ದ ಸಿದ್ಧತೆಗಳ ಆಘಾತಕಾರಿ ವಿಷಯಗಳು ಬಯಲಾಗಿದೆ.
ಎಲ್ಇಟಿ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಉಗ್ರನೊಬ್ಬನನ್ನು ಕೇರಳದ ಕೊಚ್ಚಿ ಪೊಲೀಸರು ಗುರುವಾರ ಬಂಧಿಸಿದ್ದರು. ಆತನೊಂದಿಗೆ ನಿನ್ನೆ ಬಂಧಿತರಾದ ಇಬ್ಬರು ಶಂಕಿತರು ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಕೊಚ್ಚಿಯಲ್ಲಿ ಬಂಧಿಸಲ್ಪಟ್ಟ ಶಂಕಿತ ವ್ಯಕ್ತಿಯನ್ನು ರಹೀಮ್(39) ಎಂದು ಗುರುತಿಸಲಾಗಿದೆ. ಈತ ಎಲ್ಇಟಿ ಜೊತೆ ಸಂಖ್ಯ ಹೊಂದಿದ್ದು ಶ್ರೀಲಂಕಾದ ಮುಸ್ಲಿಂ ಉಗ್ರರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ರಹೀಮ್ ಕೂಡ ಹಿಂದೂಗಳ ಸೋಗಿನಲ್ಲಿ ಕೇರಳ ಪ್ರವೇಶಿಸಿ ವಿಧ್ವಂಸಕ ಕೃತ್ಯಕ್ಕಾಗಿ ಪೂರ್ವಭಾವಿ ಪರಿಶೀಲನೆ ನಡೆಸಿ ಚೆನ್ನೈನಲ್ಲಿದ್ದ ಇಬ್ಬರಿಗೆ ಮಾಹಿತಿ ನೀಡಿದ್ದ ಎಂಬುದು ಗೊತ್ತಾಗಿದೆ. ಚೆನ್ನೈನಲ್ಲಿ ನಿನ್ನೆ ಬಂಧಿತರಾದ ಇಬ್ಬರು ಶಂಕಿತ ಉಗ್ರರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎ.ಕೆ.ವಿಶ್ವನಾಥನ್ ತಿಳಿಸಿದ್ದಾರೆ.
ಇವರಿಬ್ಬರು ಪಾಕಿಸ್ತಾನದವರಾಗಿದ್ದು ಹಿಂದುಗಳ ಸೋಗಿನಲ್ಲಿ ಚೆನ್ನೈ ಪ್ರವೇಶಿಸಿದ್ದರು. ಹಣೆಗೆ ತಿಲಕ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ಬಂಧಿಸಲಾಯಿತು. ಆರು ಎಲ್ಇಡಿ ಉಗ್ರರು ಶ್ರೀಲಂಕಾದ ಸಮುದ್ರ ಮಾರ್ಗವಾಗಿ ತಮಿಳುನಾಡು ಪ್ರವೇಶಿಸಿದ್ದು, ಭಾರೀ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿದ್ದವು.
ಈ ಹಿನ್ನೆಲೆಯಲ್ಲಿ ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿನ ವಿಮಾನ ನಿಲ್ದಾಣಗಳು, ರೈಲು ಮತ್ತು ಬಸ್ ನಿಲ್ದಾಣಗಳು, ಜನನಿಬಿಡ ಪ್ರದೇಶಗಳು, ಮಾಲ್ಗಳು ಮತ್ತು ಪ್ರವಾಸಿ ತಾಣಗಳಲ್ಲಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.