ಸೇನಾ ಶಿಬಿರದ ಮೇಲೆ ದಾಳಿಗೆ ಸಜ್ಜಾಗಿದ್ದ 8 ಲಷ್ಕರ್ ಉಗ್ರರ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಸೆ.10- ಕಾಶ್ಮೀರ ಪ್ರಾಂತ್ಯದ ಸೇನಾ ಶಿಬಿರಗಳು ಮತ್ತು ಜನನಿಬಿಡ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ ಪಾಕಿಸ್ತಾನ ಬೆಂಬಲಿತ ಲಷ್ಕರ್-ಎ-ತೊಯಿಬಾ(ಎಲ್‍ಇಟಿ) ಉಗ್ರಗಾಮಿ ಸಂಘಟನೆಯ 8 ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಆರ್ಟಿಕಲ್ 370ರದ್ಧತಿ ನಂತರ ಕಣಿವೆ ಪ್ರಾಂತ್ಯದಲ್ಲಿ ಪುಲ್ವಾಮಾ ಉಗ್ರರ ದಾಳಿ ಮಾದರಿಯಲ್ಲಿ ಆಕ್ರಮಣಕ್ಕೆ ಕುತಂತ್ರ ರೂಪಿಸಿದ ಪಾಕ್ ಯತ್ನವನ್ನು ವಿಫಲಗೊಳಿಸಲಾಗಿದೆ.

ಮಹತ್ವದ ಕಾರ್ಯಾಚರಣೆಯಲ್ಲಿ 8 ಲಷ್ಕರ್ ಉಗ್ರರನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ವಿಧಿ ರದ್ಧತಿ ಬಳಿಕ ಭಾರತದ ವಿರುದ್ಧ ಕತ್ತಿ ಮಸೆಯುತ್ತ, ಪದೇ ಪದೇ ಪಾಕಿಸ್ತಾನ ದುಸ್ಸಾಹಸ ಮಾಡುತ್ತಿದೆ.

ತನ್ನ ಸೇನೆ, ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಮತ್ತು ಪಾಕ್ ಕೃಪಾಪೆಪೊಷಿತ ಉಗ್ರರನ್ನು ಭಾರತದ ಮೇಲೆ ಛೂ ಬಿಟ್ಟಿದೆ. ವಿಧ್ವಂಸಕ ದಾಳಿ ಮಾಡಲು ಸಂಚು ರೂಪಿಸಿದ್ದ 8 ಮಂದಿ ಉಗ್ರರನ್ನು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಪ್ರಮುಖ ಸ್ಥಳಗಳ ನಕ್ಷೆಗನ್ನು ವಶ ಪಡಿಸಿಕೊಂಡಿದ್ದಾರೆ.

ಈ ಉಗ್ರರು ಕಣಿವೆ ರಾಜ್ಯದ ವ್ಯಾಪಾರಿಗಳಿಗೆ ಅಂಗಡಿ ಮುಂಗಟ್ಟು ತೆರೆಯದಂತೆ ಬೆದರಿಕೆ ಹಾಕುತ್ತಿದ್ದರು. ಅಲ್ಲದೆ, ವಾಣಿಜ್ಯ ಸಂಕೀರ್ಣಗಳು ಮುಚ್ಚಿಯೇ ಇರಬೇಕೆಂದು ಕರಪತ್ರಗಳನ್ನೂ ಹಂಚುತ್ತಿದ್ದರು. ಕಳೆದ ವಾರ ಮನೆಯೊಂದರ ಮೇಲೆ ನಡೆದ ದಾಳಿಯ ಹಿಂದೆ ಈ ಉಗ್ರರದ್ದೇ ಕೈವಾಡವಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಈಗ್ಗೆ ಒಂದು ವಾರದ ಹಿಂದಷ್ಟೇ ಭಾರತೀಯ ಸೇನೆ ಎಲ್‍ಒಸಿ ಗಡಿಯಲ್ಲಿ ಇಬ್ಬರು ಪಾಕಿಸ್ತಾನ ಮೂಲದ ಉಗ್ರರನ್ನು ಬಂಧಿಸಿತ್ತು.

ಈ ವೇಳೆ ಬಂಧಿತ ಉಗ್ರರು ತಾವು ಪಾಕಿಸ್ತಾನ ಮೂಲದವರಾಗಿದ್ದು, ಪಾಕಿಸ್ತಾನ ಸೇನೆ ಮತ್ತು ಪಾಕ್ ಗುಪ್ತಚರ ಇಲಾಖೆ ಐಎಸ್‍ಐ ತಮಗೆ ತರಬೇತಿ ನೀಡಿ ಭಾರತದಲ್ಲಿ ದಾಳಿ ಮಾಡುವಂತೆ ಕಳುಹಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದರು. ಇದಾದ ಒಂದೇ ವಾರದ ಅಂತರದಲ್ಲಿ ಮತ್ತೆ 8 ಮಂದಿ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಕೆಲ ಉಗ್ರರು ಕಣಿವೆ ನುಸುಳಿರುವ ಸಾಧ್ಯತೆಯಿದ್ದು, ಯೋಧರು ಮತ್ತು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Facebook Comments