ಆಡಿಯೋಗೂ ಬಿಜೆಪಿ ಹೈಕಮಾಂಡ್ಗೂ ಸಂಬಂಧವಿಲ್ಲ : ಡಿಸಿಎಂ ಲಕ್ಷ್ಮಣ ಸವದಿ
ಹುಬ್ಬಳ್ಳಿ, ನ.5- ಆಡಿಯೋಗೂ ಬಿಜೆಪಿ ಹೈಕಮಾಂಡ್ಗೂ ಸಂಬಂಧವಿಲ್ಲ. ತನಿಖೆಯ ನಂತರ ಯಾರು ಮಾಡಿದ್ದು, ಏಕೆ ಮಾಡಿದರು ಎಂಬುದು ಬಯಲಿಗೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಂದಿಲ್ಲಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತನಿಖೆ ಮಾಡುತ್ತಿದ್ದಾರೆ. ತನಿಖೆಯ ನಂತರ ಬಯಲಿಗೆ ಬರುತ್ತದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಡಿ ಮಾಡಿಸುವುದರಲ್ಲಿ ತಜ್ಞರು. ಎರಡು ಸಿಡಿ ಮಾಡಿಸಿದ ಉದಾಹರಣೆಯಿದೆ. ಒಂದು ಬಾರಿ ಬಿಎಸ್ವೈ ಜೊತೆ ಲಿಂಗಾಯತರು ಇಲ್ಲ ಎನ್ನುವ ಆಡಿಯೋ ಮಾಡಿಸಿದರು. ಇನ್ನೊಂದು ಧರ್ಮಸ್ಥಳದಲ್ಲಿ ಲೋಕಸಭೆ ಚುನಾವಣೆ ನಂತರ ಮೈತ್ರಿ ಸರ್ಕಾರ ಬೀಳಲಿದೆ ಎಂದು ಸಿಡಿ ಮಾಡಿಸಿದರು. ಅವರು ಮೊದಲು ಸುಳ್ಳು ಹೇಳುವುದನ್ನು ಬಿಡಲಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಈ ವರ್ತನೆ ಅವರ ಘನತೆಗೆ ಸರಿಯಾದದ್ದು ಅಲ್ಲ. ನನಗೂ ಹುಬ್ಬಳ್ಳಿ ಕೋರ್ ಕಮಿಟಿ ಸಿಡಿಗೂ ಯಾವುದೇ ಸಂಬಂಧ ಇಲ್ಲ. ನಾನೂ ಹುಬ್ಬಳ್ಳಿ ಸಭೆಯಲ್ಲಿ ಹಾಜರಿದ್ದೆ. ಇದರಲ್ಲಿ ಯಾವುದೇ ಶಾಸಕರ ಕೈವಾಡ ಇಲ್ಲ. ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹಗೊಂಡ ಶಾಸಕರಿಂದಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ ಎಂದರಷ್ಟೇ ಎಂದು ಹೇಳಿದರು.
ಅನರ್ಹರ ಬಗ್ಗೆ ಹಗುರವಾಗಿ ಮಾತನಾಡಬಾರದೆಂದು ಯಡಿಯೂರಪ್ಪ ಹೇಳಿದ್ದು ನಿಜ. ಆದರೆ ಅವರ ಆಡಿಯೋವನ್ನು ತಿರುಚಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ನಾನು ಬಿಜೆಪಿ ಹೈಕಮಾಂಡ್ಗೆ ನಿಷ್ಠನಾಗಿ ಇರುವ ವ್ಯಕ್ತಿ. ಹೈಕಮಾಂಡ್ ವಿಧಾನ ಸಭೆಗೆ ಸೂಚಿಸಿದರೆ ವಿಧಾನಸಭೆ, ಪರಿಷತ್ಗೆ ಸೂಚಿಸಿದರೆ ಅಲ್ಲಿಯೇ ಸ್ಪರ್ಧೆ ಮಾಡುವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.