ಅಡಕತ್ತರಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ನ.15- ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಕಳೆದ ಚುನಾವಣೆಯಲ್ಲಿ ತನ್ನನ್ನು ಸೋಲಿಸಿ ಮುಖಭಂಗ ಮಾಡಿದ ಕಟ್ಟಾ ಪ್ರತಿಸ್ಪರ್ಧಿಯನ್ನೆ ಈಗ ಗೆಲ್ಲಿಸಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರಲು ಸಹಾಯ ಮಾಡಿದ ಮಹೇಶ ಕುಮಠಳ್ಳಿ ಅವರಿಗೆ ಪಕ್ಷವು ಮಣೆ ಹಾಕಿದೆ. ಪಕ್ಷವು ಕ್ಷೇತ್ರದ ಉಸ್ತುವಾರಿಯನ್ನು ಲಕ್ಷ್ಮಣ ಸವದಿ ಅವರಿಗೆ ವಹಿಸಿದ್ದು, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲೇಬೇಕೆಂದು ಖಡಕ್ಕಾಗಿ ಹೇಳಿದೆ.

ಕಳೆದ ಚುನಾವಣೆಯಲ್ಲಿ ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಲು ರಮೇಶ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದರು. ಅಥಣಿಯಲ್ಲಿ ಹಲವಾರು ಸಮಾವೇಶಗಳನ್ನು ನಡೆಸುವ ಮೂಲಕ ಮತದಾರರನ್ನು ಸೆಳೆದಿದ್ದರು. ರಮೇಶ ಗೆ ತಕ್ಕ ಪ್ರತ್ಯುತ್ತರ ನೀಡಲು, ಆಗ ರಾಜ್ಯ ಕೃಷಿ ಮೋರ್ಚಾದ ಅಧ್ಯಕ್ಷರಾಗಿದ್ದ ಸವದಿ, ಚುನಾವಣೆ ಸಂದರ್ಭದಲ್ಲಿ ಅಮಿತ ಶಾ ಅವರ ಸಮಾವೇಶವನ್ನು ಗೋಕಾಕನಲ್ಲಿ ಆಯೋಜಿಸಿದ್ದರು.

ಅದರ ಉಸ್ತುವಾರಿಯನ್ನು ತಾವೇ ವಹಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಶಾ ಅವರ ಸಮಾವೇಶ ರದ್ದಾಗಿತ್ತು. ಆದರೆ ಅದೇ ರಮೇಶರನ್ನು ಈಗ ಬಿಜೆಪಿ ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದು ಸವದಿ ಸಂದಿಗ್ಧಕ್ಕೆ ಸಿಲುಕಿದ್ದಾರೆ. ರಮೇಶ ವಿರುದ್ಧವೂ ಅವರು ಈಗ ತುಟಿ ಬಿಚ್ಚುವಂತಿಲ್ಲ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಮೇಶ ಜಾರಕಿಹೊಳಿ ಜೊತೆ ಸೇರಿಯೇ ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಿಕೊಂಡು ಬರಬೇಕಾಗಿದೆ. ಇನ್ನೊಂದು ವಿಚಿತ್ರವೆಂದರೆ ಕಾಂಗ್ರೆಸ್ ನಿಂದ ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಟಿಕೆಟ್ ಪಡೆದಿದ್ದಾರೆ. ಕಾಗೆ ಮತ್ತು ಸವದಿ ಮೊದಲಿನಿಂದಲೂ ಗೆಳೆಯರು. ಚುನಾವಣೆ ಸಂದರ್ಭದಲ್ಲಿ ಪರಸ್ಪರ ಸಹಕಾರ ನೀಡುತ್ತಿದ್ದರು. ಆದರೆ ಈಗ ಸವದಿ ಅವರಿಗೆ ಗೆಳೆಯನ ವಿರುದ್ಧ ಮತ್ತು ತಮ್ಮ ಹಳೆಯ ಪ್ರತಿಸ್ಪರ್ಧಿಯ ಪರವಾಗಿ ಮತ ಕೇಳಲು ಮತದಾರರ ಬಳಿ ಹೋಗಬೇಕಾಗಿದೆ.

ಪ್ರತಿಭಟನೆ ಕೂಡ ದಾಖಲಿಸುವಂತಿಲ್ಲ:
ಚುನಾವಣೆಯಲ್ಲಿ ಸೋತಿದ್ದರೂ ಮಂತ್ರಿ ಪದವಿ ಅಷ್ಟೇ ಅಲ್ಲದೆ, ಉಪ ಮುಖ್ಯಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಲಕ್ಷ್ಮಣ ಸವದಿ ಪಕ್ಷದ ದಾಕ್ಷಿಣ್ಯದಲ್ಲಿದ್ದಾರೆ. ಹೀಗಾಗಿ ಪಕ್ಷ ಹೇಳಿದ್ದನ್ನು ಕಮಕ್ ಕಿಮಕ್ ಎನ್ನದೆ ಕೇಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಹೀಗಾಗಿ, ಕ್ಷೇತ್ರದಲ್ಲಿ ರಾಜಕೀಯ ಅಸ್ತಿತ್ವವನ್ನು ಕೈಯಾರೆ ಬಿಟ್ಟುಕೊಡುವ ಸ್ಥಿತಿ ಎದುರಾಗಿದ್ದರೂ ತಮ್ಮ ನೋವನ್ನು ಹೊರಹಾಕಲಾರದಂತಾಗಿದೆ.

ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಗೊಂಡ ಸವದಿ ಬೆಂಬಲಿಗರು ಇವತ್ತು ಭಾರೀ ಪ್ರತಿಭಟನೆ ಮತ್ತು ಪಾದಯಾತ್ರೆಗಳನ್ನು ಆಯೋಜಿಸಿದ್ದರು. ಆದರೆ ಹೈಕಮಾಂಡ್ ತರಾಟೆಗೆ ತೆಗೆದುಕೊಳ್ಳುತ್ತಲೇ ಸವದಿಯವರು ತಮ್ಮ ಬೆಂಬಲಿಗರಿಗೆ ಮನವಿ ಮಾಡಿ ಪ್ರತಿಭಟನೆಯನ್ನು ಕೈಬಿಡುವಂತೆ ಮಾಡಿದ್ದಾರೆ.

ಕುಮಠಳ್ಳಿ ಸೋಲು ಗೆಲುವಿನ ಮೇಲೆ ನಿಂತಿದೆಯಾ ಸವದಿ ಮಂತ್ರಿ ಸ್ಥಾನ? :ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಲಕ್ಷ್ಮಣ ಸವದಿ ಅವರಿಗೆ ಪಕ್ಷ ವಹಿಸಿದ್ದು, ಅವರ ಸೋಲು ಗೆಲುವಿನ ಆಧಾರದ ಮೇಲೆ ಅವರ ಉಪ ಮುಖ್ಯಮಂತ್ರಿ ಸ್ಥಾನ ನಿಂತಿದೆ ಎಂದು ಹೇಳಲಾಗುತ್ತಿದೆ.

ಟಿಕೆಟ್ ಕೈ ತಪ್ಪುವ ಮೂಲಕ ಶಾಸಕರಾಗುವ ಅವಕಾಶ ಕಡಿದುಕೊಂಡಿರುವ ಲಕ್ಷ್ಮಣ ಸವದಿ ಮಂತ್ರಿಯಾಗಿಯೇ ಮುಂದುವರಿಯಲು ವಿಧಾನ ಪರಿಷತ್ತಿಗೆ ಸದಸ್ಯರಾಗಿ ಆಯ್ಕೆಯಾಗಬೇಕಾಗಿದೆ. ಆದರೆ ಸದ್ಯಕ್ಕೆ ಪಕ್ಷದಲ್ಲಿ ಯಾವುದೇ ವಿಧಾನ ಪರಿಷತ್ ಸದಸ್ಯ ಸ್ಥಾನ ಖಾಲಿ ಇಲ್ಲ. ಇದಕ್ಕಾಗಿ ಯಾರಾದರೂ ಹಾಲಿ ಸದಸ್ಯರು ತಮ್ಮ ಸ್ಥಾನವನ್ನು ತ್ಯಾಗ ಮಾಡಬೇಕಾಗಿದೆ. ಇದು ಸಾಧ್ಯವೇ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Comments