ವಿಧಾನ ಪರಿಷತ್‍ ಚುನಾವಣೆ : ನಾಳೆ ಡಿಸಿಎಂ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.4- ವಿಧಾನಸಭೆಯಿಂದ ವಿಧಾನ ಪರಿಷತ್‍ನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ನಾಳೆ ಬಿಜೆಪಿ ಅಭ್ಯರ್ಥಿಯಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಗುರುವಾರ ಕಡೆ ದಿನವಾಗಿದ್ದು, ಬಿಜೆಪಿಯಿಂದ ಸವದಿ ನಾಳೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಸೋಮವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. 17ರಂದು ಅಗತ್ಯವಿದ್ದರೆ ಚುನಾವಣೆ ನಡೆಯಲಿದೆ.

ಈಗಿರುವ ವಿಧಾನಸಭೆಯ ಬಲಾಬಲದಲ್ಲಿ ಆಡಳಿತಾರೂಢ ಬಿಜೆಪಿಗೆ ಒಂದು ಸ್ಥಾನ ಒಲಿಯುವುದು ಖಚಿತ. ಯಾವುದೇ ಅಭ್ಯರ್ಥಿ ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಆಯ್ಕೆಯಾಗಬೇಕಾದರೆ 112 ಮತಗಳನ್ನು ಪಡೆಯಬೇಕು.  ಬಿಜೆಪಿ 117, ಜತೆಗೆ ಓರ್ವ ಪಕ್ಷೇತರ ಶಾಸಕರ ಬೆಂಬಲವನ್ನೂ ಹೊಂದಿದೆ. ಕಾಂಗ್ರೆಸ್ 65 ಹಾಗೂ ಜೆಡಿಎಸ್ 35 ಶಾಸಕರನ್ನು ಹೊಂದಿದೆ.

ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೂ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗುವುದಿಲ್ಲ. ಈಗಾಗಲೇ ಕಾಂಗ್ರೆಸ್ ಪರಿಷತ್ ಚುನಾವಣೆಗೆ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಘೋಷಣೆ ಮಾಡಿದೆ.  ಇನ್ನು ಜೆಡಿಎಸ್ ಕೂಡ ಕಾಂಗ್ರೆಸ್ ಹಾದಿಯನ್ನೇ ಅನುಸರಿಸುವ ಸಾಧ್ಯತೆ ಇದೆ. ಒಂದು ವೇಳೆ ಎರಡೂ ಪಕ್ಷಗಳು ಕಣದಿಂದ ಹಿಂದೆ ಸರಿದರೆ ಲಕ್ಷ್ಮಣ ಸವದಿ ಅವಿರೋಧವಾಗಿ ಪರಿಷತ್‍ಗೆ ಆಯ್ಕೆಯಾಗಲು ಹಾದಿ ಸುಗಮವಾಗಲಿದೆ.

ಪದ್ಮನಾಭ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಯಾರೊಬ್ಬರೂ ಸೂಚಕರಾಗಿ ಸಹಿ ಹಾಕದ ಕಾರಣ ನಾಮಪತ್ರ ತಿರಸ್ಕøತವಾಗುವ ಸಾಧ್ಯತೆಗಳೇ ಹೆಚ್ಚು. ಕಳೆದ ಡಿಸೆಂಬರ್‍ನಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಶಿವಾಜಿನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಹೀಗಾಗಿ ಅವರು ಪರಿಷತ್‍ಗೆ ರಾಜೀನಾಮೆ ನೀಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಲಕ್ಷ್ಮಣ ಸವದಿ ಅಚ್ಚರಿ ಎಂಬಂತೆ ಸಂಪುಟಕ್ಕೆ ಸೇರ್ಪಡೆಯಾಗಿ ಉಪಮುಖ್ಯಮಂತ್ರಿಯಾದರು. ಸಚಿವರಾದವರು ಆರು ತಿಂಗಳೊಳಗೆ ಯಾವುದೇ ಸದನದ ಸದಸ್ಯರಾಗಬೇಕೆಂಬ ನಿಯಮವಿದೆ. ಇದೀಗ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಲಕ್ಷ್ಮಣ ಸವದಿ ಆಯ್ಕೆಯಾಗುವುದು ಬಹುತೇಕ ಖಚಿತ.

Facebook Comments