ಡಿಸಿಎಂ ಸವದಿ ಹಾದಿ ಸುಗಮ, ಅನಿಲ್‍ಕುಮಾರ್ ಕಣದಿಂದ ನಿವೃತ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.15- ವಿಧಾನಸಭೆಯಿಂದ ವಿಧಾನಪರಿಷತ್‍ನ ಒಂದು ಸ್ಥಾನಕ್ಕೆ ಸೋಮವಾರ ನಡೆಯುವ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿ.ಆರ್.ಅನಿಲ್‍ಕುಮಾರ್ ಕಣದಿಂದ ನಿವೃತ್ತಿಯಾಗಿದ್ದಾರೆ ಎಂದು ಘೋಷಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು. ನಾಮಪತ್ರ ವಾಪಸ್ ಪಡೆಯಲು ನಿಗದಿಪಡಿಸಿದ ಗಡುವು ಮುಕ್ತಾಯವಾಗಿರುವುದರಿಂದ ಕಣದಿಂದ ಹಿಂದೆ ಸರಿದಿದ್ದಾರೆ.

ಅನಿಲ್‍ಕುಮಾರ್ ಅವರ ಪ್ರತಿಪಕ್ಷಗಳಾದ ಕಾಂಗ್ರೆಸ್- ಜೆಡಿಎಸ್ ಶಾಸಕರ ಬೆಂಬಲದ ನಿರೀಕ್ಷೆಯಲ್ಲಿ ಸ್ಪರ್ಧೆಗಿಳಿದಿದ್ದರು. ಮತದಾನ ನಡೆಯಲು ಇನ್ನು ಒಂದು ದಿನ ಬಾಕಿ ಇರುವಾಗ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಅನಿಲ್‍ಕುಮಾರ್ ಅವರು ನಾಮಪತ್ರಕ್ಕೆ ಜೆಡಿಎಸ್ ಶಾಸಕರು ಸೂಚಕರಾಗಿ ಸಹಿ ಹಾಕಿದ್ದರು. ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರ ಆಯ್ಕೆ ಹಾದಿ ಇದರಿಂದ ಸುಗಮವಾದಂತಾಗಿದೆ.

ಅನಿಲ್‍ಕುಮಾರ್ ಕಣದಿಂದ ಹಿಂದೆ ಸರಿದಿದ್ದರೂ ಸೋಮವಾರ ವಿಧಾನಪರಿಷತ್‍ನ ಉಪಚುನಾವಣೆಗೆ ಮತದಾನ ನಡೆಯುವುದು ಅನಿವಾರ್ಯವಾಗಿದೆ. ಮತಪತ್ರದಲ್ಲಿ ಸ್ಪರ್ಧೆಯಲ್ಲಿರುವ ಇಬ್ಬರು ಹೆಸರು ಇರುವುದರಿಂದ ಮತದಾನ ನಡೆಯಲಿದೆ. ಸುದ್ದಿಗಾರರೊಂದಿಗೆ ಅನಿಲ್‍ಕುಮಾರ್ ಮಾತನಾಡಿ, ವಿಧಾನಪರಿಷತ್‍ನ ಉಪಚುನಾವಣೆ ಸ್ಫರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಶಾಸಕರು ಸ್ಪರ್ಧಿಸಲು ಬೆಂಬಲ ಕೊಟ್ಟಿದ್ದರು. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ. ನನಗೆ ಯಾರೂ ಬ್ಲಾಕ್‍ಮೇಲ್ ಮಾಡಿಲ್ಲ. ಆದರೆ ಸ್ಪರ್ಧೆಯಿಂದ ಕಾಂಗ್ರೆಸ್-ಜೆಡಿಎಸ್ ಪಕ್ಷಕ್ಕೆ ಮುಜುಗರ ಆಗಬಾರದೆಂದು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ನನ್ನ ಧಾರ್ಮಿಕ ಗುರುಗಳು ಸಹ ಕಣದಿಂದ ಹಿಂದೆ ಸರಿಯುವಂತೆ ಸಲಹೆ ಮಾಡಿದ್ದರು. ಹೀಗಾಗಿ ವಿಧಾನಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದಿರುವುದಾಗಿ ಹೇಳಿದರು.

Facebook Comments