ಪದವಿ ಪೂರ್ವ ಶಿಕ್ಷಣ ಇಲಾಖೆಯ ನಕಲಿ ಆದೇಶ ಸೃಷ್ಟಿಸಿದ್ದ ಉಪನ್ಯಾಸಕನಿಗೆ ಜೈಲು ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ಪದವಿ ಪೂರ್ವ ಶಿಕ್ಷಣ ಇಲಾಖೆಯ ನಕಲಿ ಆದೇಶವನ್ನು ಸೃಷ್ಟಿಸಿ ಕೆಲಸಕ್ಕೆ ಮರು ಸೇರ್ಪಡೆಗೊಂಡಿದ್ದ ಉಪನ್ಯಾಸಕನಿಗೆ ಚಳ್ಳಕೆರೆಯ ಪ್ರಿನ್ಸಿಪಲ್ ಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಎರಡು ವರ್ಷ ಶಿಕ್ಷೆ ಹಾಗೂ 10ಸಾವಿರ ದಂಡ ವಿಧಿಸಿದೆ.

ಚಳ್ಳಕೆರೆಯ ಶ್ರೀ ರವೀಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಕರಿಬಸಪ್ಪ ಆನಗೋಡು ಮತ್ತು ಅದೇ ಕಾಲೇಜಿನ ಪ್ರಾಂಶುಪಾಲ ಎ.ವೆಂಕಟೇಶ್ ಸೇರಿಕೊಂಡು ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಿಂದ ಹೊರಡಿಸಿದೆ ಎನ್ನಲಾದ ಎರಡು ನಕಲಿ ಆದೇಶಗಳನ್ನು ಸೃಷ್ಟಿಸಿ ಬೆಂಗಳೂರಿನ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ತನ್ನ ಕೆಲಸದಿಂದ ತೆಗೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ, ಬಾಕಿ ವೇತನ ಪಾವತಿಸುವಂತೆ ವಾದಿಸಿದ್ದರು.

ರಿಟ್ ಅರ್ಜಿ ವಿಚಾರಣೆ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆದೇಶಗಳು ನಕಲಿ ಎಂದು ಕಂಡು ಬಂದಿತ್ತು. ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.  ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಘಟಕ ಕರಿಬಸಪ್ಪ ಅನಗೋಡು ಹಾಗೂ ಮತ್ತೊಬ್ಬ ಆರೋಪಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಕರಿಬಸಪ್ಪ ಆನಗೋಡ್‍ಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು 10ಸಾವಿರ ದಂಡ ವಿಧಿಸಿದೆ.  ದಂಡ ಕಟ್ಟಲು ವಿಫಲವಾದರೆ ಒಂದು ತಿಂಗಳು ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿದೆ.

Facebook Comments