ನರ ಭಕ್ಷಕ ಚಿರತೆಗಾಗಿ ನಿರಂತರ ಕೂಂಬಿಂಗ್
ತುಮಕೂರು, ಜ.13- ಜಿಲ್ಲೆಯ ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ ಗ್ರಾಮದಲ್ಲಿ ಇತ್ತೀಚೆಗೆ ಬಾಲಕನ್ನು ಬಲಿತೆಗೆದುಕೊಂಡ ನರಭಕ್ಷಕ ಚಿರತೆಗಾಗಿ ಕಾಡಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ನಿರಂತರವಾಗಿ ಕೂಂಬಿಂಗ್ ನಡೆಸುತ್ತಿದ್ದು, ಆದರೂ ಪತ್ತೆಯಾಗಿಲ್ಲ. ಅಜ್ಜಿಯೊಂದಿಗೆ ಜಮೀನಿಗೆ ಹೋಗಿ ವಾಪಸ್ ಮನೆಗೆ ಬರುವಾಗ ಬಾಲಕ ಸಮರ್ಥಗೌಡನ ಮೇಲೆ ಚಿರತೆ ದಾಳಿ ನಡೆಸಿ ರಕ್ತ ಹೀರಿ ಪರಾರಿಯಾಗಿತ್ತು. ಅಜ್ಜಿಯ ಕಣ್ಣಮುಂದೆಯೆ ನರಭಕ್ಷಕ ಚಿರತೆ ಮೊಮ್ಮಗನ ಕೊಂದು ಹಾಕಿತ್ತು.
ಈ ಘಟನೆಯಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಜಿಲ್ಲೆಯ ವಿವಿಧೆಡೆ ನರಭಕ್ಷಕ ಚಿರತೆ ಮೂವರನ್ನು ಬಲಿ ಪಡೆದಿವೆ. ಇದರಿಂದ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ದ ತಿರುಗಿ ಬಿದ್ದಿ ಚಿರತೆಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಚಿರತೆಗಾಗಿ ಶೋಧಕಾರ್ಯ ನಡೆಸಿದ್ದು, ಸಿ.ಎಸ್.ಪುರ,ಮಣ್ಣಿಕುಪ್ಪೆ ಸೇರಿದಂತೆ ಹಲವು ಅರಣ್ಯ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತಿದ್ದಾರೆ. ಬಂಡಿಪುರ, ಹಾಸನ ಹಾಗೂ ತುಮಕೂರು ಜಿಲ್ಲೆಯ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸಿ.ಎಸ್.ಪುರ ಹೋಬಳಿಯ ಸುತ್ತಮುತ್ತ ಒಟ್ಟು 20 ಬೋನುಗಳನ್ನ ಇರಿಸಲಾಗಿದೆ. ರಾತ್ರಿ ಮತ್ತು ಹಗಲು ಹೊತ್ತಲ್ಲೂ ಕೂಂಬಿಂಗ್ ಮಾಡುತಿದ್ದಾರೆ. ಸಿಸಿಎಫ್ ಶಂಕರ್, ಡಿಎಫ್ಓ ಗಿರೀಶ್ ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ. ಒಟ್ಟು 80 ಕ್ಕೂ ಹೆಚ್ಚು ಸಿಬ್ಬಂದಿಗಳು ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸುಮಾರು ನಾಲ್ಕು ಚಿರತೆಗಳು ಸಿ.ಎಸ್.ಪುರ ಸುತ್ತಮುತ್ತ ಇದೆ ಎಂದು ಅಂದಾಜಿಸಲಾಗಿದೆ. ಕೆಲ ತೋಟಗಳಿಂದ ಚಿರತೆ ಓಡಿಹೋಗಿರುವ ಹೆಜ್ಜಗುರುತು ಪತ್ತೆಯಾಗಿದೆ. ತುರುವೇಕೆರೆ ಕ್ಷೇತ್ರದ ಶಾಸಕ ಮಸಾಲೆ ಜಯರಾಮ ಕೂಡ ಅರಣ್ಯ ಸಿಬ್ಬಂದಿಗಳಿಗೆ ಸಾಥ್ ನೀಡುತಿದ್ದಾರೆ. ಚಿರತೆ ಭೀತಿಯಿಂದ ಮಣ್ಣಿಕುಪ್ಪೆ ಗ್ರಾಮದ ಜನರು ಹಗಲು ಹೊತ್ತಲ್ಲೇ ಮನೆ ಬಾಗಿಲು ಹಾಕಿಕೊಂಡು ಕಾಲ ಕಳೆದಯುವಂತಾಗಿದೆ. ಹೊಲ-ಗದ್ದೆಗಳಿಗೆ ಹೋಗಲು ಹೆದರುವಂತಾಗಿದೆ.