ಬೋನು ಇಟ್ಟಲ್ಲೆಲ್ಲಾ ಸೆರೆಯಾಗುತ್ತಿವೆ ಚಿರತೆಗಳು, ಆತಂಕದಲ್ಲಿ ಗ್ರಾಮಸ್ಥರು

ಈ ಸುದ್ದಿಯನ್ನು ಶೇರ್ ಮಾಡಿ

ಮಾಗಡಿ, ಮೇ 27- ಬೋನುಗಳು ಇಟ್ಟ ಕಡೆಯೆಲ್ಲಾ ಸೆರೆಯಾಗುತ್ತಲೇ ಇರುವ ಚಿರತೆಗಳು. ಪ್ರತಿ ನಿತ್ಯ ಒಂದು, ಎರಡು ಚಿರತೆಗಳು ಬಂಧಿಯಾಗುತ್ತಲೇ ಇವೆ. ಇದರಿಂದ ಗ್ರಾಮಸ್ಥರು ಪ್ರತಿ ದಿನ ಪ್ರತಿಕ್ಷಣ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ನಿನ್ನೆಯಷ್ಟೇ ತಗ್ಗಿಕುಪ್ಪೆ , ಬೋಡುಗನ ಪಾಳ್ಯದಲ್ಲಿ ಎರಡು ಚಿರತೆಗಳು ಸೆರೆಯಾಗಿದ್ದವು. ಇಂದು ಮೋಟಗುಂಡನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಹೊಸ ಪಾಳ್ಯ , ಬೆಳಗುಂಬದ ತೊರೆಚನ್ನಹಳ್ಳಿ ಬಳಿ ಇಂದು ಮತ್ತೆರಡು ಚಿರತೆಗಳು ಸೆರೆಯಾಗಿವೆ.

ಮೇಲಿಂದ ಮೇಲೆ ಚಿರತೆಗಳು ಅರಣ್ಯ ಇಲಾಖೆ ಇಟ್ಟಿರುವ ಬೋನುಗಳಲ್ಲಿ ಬಂಧಿಯಾಗುತ್ತಲೇ ಇವೆ. ಇದರಿಂದ ತಾಲ್ಲೂಕಿನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ.

ನಿನ್ನೆ ಸಂಜೆ ಬೆಳಗುಂಬ ವ್ಯಾಪ್ತಿಯ ತೊರೆ ಚನ್ನಹಳ್ಳಿ ಬಳಿ ಜಾನುವಾರುಗಳು ಮೇಯಿಸುತ್ತಿದ್ದ ಚೇಲನರಸಯ್ಯ ಹಾಗೂ ಸುಮಲತಾ ಎಂಬುವರ ಮೇಲೆ ದಾಳಿ ಮಾಡಿವೆ.

ಅಲ್ಲದೆ ಕುರಿಗಳನ್ನು ಸಹ ತಿಂದು ಹೋಗಿವೆ. ಈ ಘಟನೆಗಳಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಜಮೀನುಗಳ ಬಳಿ ಕೆಲಸ , ಕಾರ್ಯಗಳಿಗೆ ಹೋಗಲು ರೈತರು, ಕೂಲಿಯಾಳುಗಳು ಹೆದರುತ್ತಿದ್ದಾರೆ. ಇನ್ನು ಎಷ್ಟು ಚಿರತೆಗಳು ತಾಲ್ಲೂಕಿನಲ್ಲಿವೆಯೋ ಯಾವ ಕ್ಷಣದಲ್ಲಿ ದಾಳಿ ಮಾಡುತ್ತವೆಯೋ ಎಂದು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುವಂತಾಗಿದೆ.

Facebook Comments