ಆಟವಾಡುತ್ತಿದ್ದ ಬಾಲಕಿಯ ಮೇಲೆ ಚಿರತೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಕುಣಿಗಲ್,ಜೂ.5-ಆಟವಾಡುತ್ತಿದ್ದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಪಟ್ಟಣದ ಜನತೆ ಬೆಚ್ಚಿಬಿದ್ದಿದ್ದಾರೆ.  ತಾಲ್ಲೂಕಿನ ಕೊತ್ತಗೆರೆ ಹೋಬಳಿ ಕರೆಸಾಣಯ್ಯನಪಾಳ್ಯದ ನಾಗರಾಜ್ ಎಂಬುವರ ಪುತ್ರಿ ರೇಖಾ ಚಿರತೆ ದಾಳಿಯಿಂದ ಗಂಭೀರ ಸ್ಥಿತಿಯಲ್ಲಿದ್ದಾಳೆ.

ತೋಟಗಳ ಸುತ್ತಮುತ್ತ ಹಲವಾರು ಚಿರತೆಗಳು ಆಗಾಗ್ಗೆ ಕಾಣಿಸಿಕೊಂಡು ಪ್ರಾಣಿಗಳ ಮೇಲೆ ದಾಳಿ ನಡೆಸಿವೆ. ಇದೀಗ ಬಾಲಕಿ ಮೇಲೆ ಮಾರಣಾಂತಿಕ ದಾಳಿ ನಡೆಸಿರುವುದರಿಂದ ಜನತೆ ತೀವ್ರ ಆತಂಕಗೊಂಡಿದ್ದಾರೆ.

ನಾಗರಾಜ್ ಕುಟುಂಬ ತೋಟದ ಮನೆಯಲ್ಲಿ ವಾಸವಿದ್ದಾರೆ. ನಿನ್ನೆ ಸಂಜೆ 4.30ರ ವೇಳೆ ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದಳು. ಅದೆಲ್ಲಿಂದ ಬಂತೋ ಚಿರತೆ ಏಕಾಏಕಿ ಬಾಲಕಿಯ ಮೇಲೆ ಎರಗಿ ಸ್ವಲ್ಪ ದೂರ ಎಳೆದೊಯ್ದು, ನಂತರ ಅಲ್ಲೆ ಬಿಟ್ಟು ಹೋಗಿದೆ.

ಬಾಲಕಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಕೆಯ ಚೀರಾಟ ಕೇಳಿ ಧಾವಿಸಿದ ಪೋಷಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಷಯ ತಿಳಿದು ಶಾಸಕ ಡಾ.ರಂಗನಾಥ್ ಆಸ್ಪತ್ರೆಗೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದರು. ತದನಂತರ ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಯಿತು.

ಮಗುವಿನ ಉಸಿರಾಟ ಗಮನಿಸಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕಿಯ ಆಸ್ಪತ್ರೆ ವೆಚ್ಚಕ್ಕಾಗಿ ಶಾಸಕ ರಂಗನಾಥ್ ಒಂದು ಲಕ್ಷ ರೂ. ನೀಡಿ ಧೈರ್ಯ ತುಂಬಿಬಂದಿದ್ದಾರೆ. ಪಟ್ಟಣ ಸುತ್ತಮುತ್ತ ಚಿರತೆಗಳ ದಾಳಿ ವಿಪರೀತವಾಗಿದ್ದು, ಚಿರತೆಗಳನ್ನು ಹಿಡಿದು ಮಕ್ಕಳು, ಸಾಕುಪ್ರಾಣಿಗಳನ್ನು ರಕ್ಷಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.   ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments