ಕೊನೆಗೂ ಸೆರೆಯಾಯ್ತು ಐವರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.17- ಕಳೆದ ಒಂದು ವರ್ಷದಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಹಾಗೂ ಐವರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆ ಅಂತೂ ಇಂತೂ ಸೆರೆಯಾಗಿದ್ದು, ಜನತೆ ನಿಟ್ಟುಸಿರುಬಿಟ್ಟಿದ್ದಾರೆ. ಜಿಲ್ಲೆಯ ಹೆಬ್ಬೂರು, ಚಿಕ್ಕಮಾಲವಾಡಿ, ಮಣಿಕುಪ್ಪೆ ಪ್ರದೇಶಗಳಲ್ಲಿ ಕಳೆದ ಒಂದು ವರ್ಷದಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಜನ-ಜಾನುವಾರುಗಳನ್ನು ಬಲಿ ಪಡೆದುಕೊಂಡಿತ್ತು.

ಚಿರತೆ ಸೆರೆಗಾಗಿ ಗ್ರಾಮಸ್ಥರು ಮಾಡಿದ ಮನವಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಬಾಧಿತ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‍ಗಳನ್ನು ಅಳವಡಿಸಿ ಚಿರತೆಗಳ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದರು. ಇದರಿಂದ ಚಿರತೆಯನ್ನು ಸೆರೆಹಿಡಿಯಲು ಸಹಕಾರಿಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

ಒಟ್ಟು 45 ಟ್ರ್ಯಾಪ್ ಕ್ಯಾಮೆರಾಗಳು ಮತ್ತು ಟ್ರ್ಯಾಪ್ ಕೇಜ್‍ಗಳನ್ನು ಅಳವಡಿಸಲಾಗಿತ್ತು. ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಗಂಡು ಚಿರತೆಯೊಂದು ಸಂಚಾರ ಮಾಡುತ್ತಿತ್ತು. ಇದರಿಂದ ಗ್ರಾಮಸ್ಥರು ಕಂಗೆಟ್ಟಿದ್ದರು.  ಬನ್ನಿಕುಪ್ಪೆ ಪ್ಲಾಂಟೇಷನ್ ಬಳಿ 1್ಡ010 ಅಗಲದಲ್ಲಿ ವಿಶೇಷ ಟ್ರ್ಯಾಪ್‍ಗೇಜ್ ನಿರ್ಮಾಣ ಮಾಡಿದ್ದು, ಆಹಾರವನ್ನರಸಿ ಬಂದ ಚಿರತೆ ಈ ಟ್ರ್ಯಾಪ್‍ಗೇಜ್‍ನಲ್ಲಿ ಸೆರೆಯಾಗಿತ್ತು.

ಬನ್ನೇರುಘಟ್ಟದ ಜೈವಿಕ ಉದ್ಯಾನವನದ ಅರವಳಿಕೆ ತಜ್ಞರಾದ ಡಾ.ರಮೇಶ್ ಅವರು ಚಿರತೆಗೆ ಅರವಳಿಕೆ ಮದ್ದು ನೀಡಿ ನಂತರ ಸುರಕ್ಷಿತವಾಗಿ ಬನ್ನೇರುಘಟ್ಟ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ಇನ್ನು ಈ ಪ್ರದೇಶದಲ್ಲಿ ಎರಡು ಚಿರತೆಗಳು ಸಕ್ರಿಯವಾಗಿರುವುದರ ಬಗ್ಗೆ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅವುಗಳನ್ನು ಸಹ ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿದಿದೆ.

ಸಾರ್ವಜನಿಕರು ಅರಣ್ಯ ಇಲಾಖೆ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಚಿರತೆಗಳ ಸೆರೆಗೆ ಸಹಕರಿಸುವಂತೆ ತುಮಕೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಮನವಿ ಮಾಡಿದ್ದಾರೆ.

Facebook Comments