ಹಸು ಮೇಯಿಸುತ್ತಿದ್ದ ರೈತನ ಮೇಲೆ ಚಿರತೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಕನಕಪುರ, ಮೇ 27- ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ರೈತನೊಬ್ಬನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ತಾಲೂಕಿನ ಮರಳವಾಡಿ ಸಮೀಪದ ಆನೆ ಹೊಸಹಳ್ಳಿಯಲ್ಲಿ ಸಂಭವಿಸಿದೆ. ತಾಲೂಕಿನ ಮರಳವಾಡಿ ಸಮೀಪದ ಹೊಸಹಳ್ಳಿ ಗ್ರಾಮದ 70 ವರ್ಷದ ಮಾದೇಗೌಡ ಎಂಬುವವರು ಚಿರತೆ ಧಾಳಿಗೆ ಒಳಗಾದ ವ್ಯಕ್ತಿಯಾಗಿದ್ದಾರೆ.

ಬೆಳಗ್ಗೆ ತಮ್ಮ ಜಮೀನಿನ ಬಳಿ ಹಸು ಮೇಯಿಸುತ್ತಿದ್ದ ವೇಳೆ ಹಠಾತ್ತನೆ ಪ್ರತ್ಯಕ್ಷವಾದ ಚಿರತೆ, ಹಸು ಮತ್ತು ಮಾದೇಗೌಡರ ಮೇಲೆ ದಾಳಿ ಮಾಡಿದೆ. ಹಸುವನ್ನು ರಕ್ಷಿಸಲು ಹೋದ ರೈತನಿಗೆ ಚಿರತೆ ಧಾಳಿ ಮಾಡಿದ್ದರಿಂದ ತಲೆ, ಎದೆ, ಕೈಗಳಿಗೆ ಗಾಯಗಳಾಗಿವೆ. ಚಿರತೆ ದಾಳಿಯಲ್ಲಿ ಹಸು ಸಹ ಗಾಬರಿಗೊಂಡು ತನ್ನ ಕೊಂಬಿನಿಂದ ದಾಳಿ ಮಾಡಲು ಮುಂದಾದಾಗ ಚಿರತೆ ಅಲ್ಲಿಂದ ಓಡಿಹೋಗಿದೆ.

ಮಾದೇಗೌಡನ ಕಿರುಚಾಟದ ಶಬ್ದ ಕೇಳಿ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದ ಈತನನ್ನು ಮರಳವಾಡಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ವಿಷಯ ತಿಳಿದ ವಲಯ ಅರಣ್ಯಾಧಿಕಾರಿ ದಿನೇಶ್, ಡಿಆರ್‍ಎಫ್‍ಒ ರಮೇಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ಮೊದಲು: ವಲಯ ಅರಣ್ಯಾಧಿಕಾರಿ ದಿನೇಶ್ ಹಾಗೂ ಡಿಆರ್‍ಎಫ್‍ಒ ರಮೇಶ್ ಮಾತನಾಡಿ, ಈ ಭಾಗದಲ್ಲಿ ಚಿರತೆ ದಾಳಿ ಇದೇ ಮೊದಲು. ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಈಗಾಗಲೇ ಅರಣ್ಯ ಪ್ರದೇಶದ ಒಳಗಿನಿಂದ ಎರಡು ಚಿರತೆಗಳು ಹೊರಬಂದ ಹಿನ್ನೆಲೆಯಲ್ಲಿ ಈ ಭಾಗದ ರಾಂಪುರದ ಬಳಿ ಬೋನ್ ಅಳವಡಿಸಲಾಗಿದೆ.

ಇದಕ್ಕೂ ಮೊದಲು ಮಲ್ಲಿಗೆಮೆಟ್ಲು, ಆನೆಹೊಸಹಳ್ಳಿಯ ಬಳಿಯೂ ಬೋನು ಇಡಲಾಗಿತ್ತು. ಈ ಘಟನೆ ನಡೆದ ಸ್ಥಳದ ಸಮೀಪವೂ ಈಗ ಬೋನು ಅಳವಡಿಸಿ ಚಿರತೆ ಬಲೆಗೆ ಪ್ರಯತ್ನಿಸಲಾಗುವುದು. ಗಾಯಗೊಂಡ ವ್ಯಕ್ತಿಗೆ ಇಲಾಖೆಯಿಂದ ದೊರೆಯುವ ಪರಿಹಾರ ನೀಡಲಾಗುವುದು ಎಂದರು.

Facebook Comments