ಬಹಿರ್ದೆಸೆಗೆ ತೆರಳಿದ್ದ ವೃದ್ಧೆಯನ್ನು ತಿಂದು ತೇಗಿದ ಚಿರತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮಾಗಡಿ, ಮೇ 16-ನರಭಕ್ಷಕ ಚಿರತೆ ಸೆರೆಯಾಯ್ತು, ಗ್ರಾಮಸ್ಥರಲ್ಲಿದ್ದ ಆತಂಕ ದೂರವಾಯ್ತು ಎನ್ನುವಷ್ಟರಲ್ಲೇ ಇಂದು ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದ ವೃದ್ಧೆಯನ್ನು ಚಿರತೆ ಹೊತ್ತೊಯ್ದು ತಿಂದು ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ತಾಲ್ಲೂಕಿನ ಕೊಟ್ಟಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗಂಗಮ್ಮ (68) ಚಿರತೆ ದಾಳಿಗೆ ಬಲಿಯಾದ ವೃದ್ಧೆ.

ಮಾಗಡಿ ತಾಲ್ಲೂಕಿನ ಕದರಯ್ಯನ ಪಾಳ್ಯದಲ್ಲಿ ಮನೆಗೆ ನುಗ್ಗಿದ ಚಿರತೆ ಮಗುವನ್ನು ಎಳೆದೊಯ್ದು ತಿಂದು ಹಾಕಿತ್ತು. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಚಿರತೆ ಸೆರೆಗಾಗಿ ಅರಣ್ಯ ಇಲಾಖೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಗ್ರಾಮದ ಬಳಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಲಾಗಿತ್ತು.

ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟು ಅವರಲ್ಲಿದ್ದ ಆತಂಕ ದೂರವಾಗಿತ್ತು.ಆದರೆ, ಇಂದು ಬೆಳಗ್ಗೆ ಬೆಂಗಳೂರು ಗ್ರಾಮಾಂತರ ತಾಲ್ಲೂಕಿನ ಕೊಟ್ಟಗಾನಹಳ್ಳಿ ಗ್ರಾಮದ ವೃದ್ಧೆ ಗಂಗಮ್ಮ ಬಹಿರ್ದೆಸೆಗೆ ತೆರಳಿದ್ದಾಗ ಏಕಾಏಕಿ ವೃದ್ಧೆ ಮೇಲೆ ಎಗರಿದ ಚಿರತೆ ಪೊದೆಯೊಳಗೆ ಎಳೆದೊಯ್ದು ತಿಂದು ಸಾಯಿಸಿ ಪರಾರಿಯಾಗಿದೆ.

ಗ್ರಾಮಸ್ಥರು ಗ್ರಾಮದ ಹೊರಭಾಗದಲ್ಲಿ ಓಡಾಡುತ್ತಿದ್ದಾಗ ವೃದ್ಧೆಯ ರುಂಡ-ಮುಂಡ ಪತ್ತೆಯಾಗಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಮಾಗಡಿ ತಾಲ್ಲೂಕು ಹಾಗೂ ಬೆಂಗಳೂರು ಗ್ರಾಮಾಂತರ ತಾಲ್ಲೂಕಿನಲ್ಲಿ ದೂರವಾಗಿದ್ದ ಆತಂಕ ಮತ್ತೆ ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಸಂಬಂಧ ತಾವರೆಕೆರೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin