ಮಲಗಿದ್ದ ಮಗುವನ್ನು ಎಳೆದೊಯ್ದು ತಿಂದು ಹಾಕಿದ ಚಿರತೆ..!

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಮೇ 9- ಸೆಖೆಯೆಂದು ಬಾಗಿಲು ತೆರೆದಿದ್ದ ಮನೆಗೆ ನುಗ್ಗಿದ ಒಂಟಿ ಚಿರತೆ ಪುಟ್ಟ ಮಗುವನ್ನು ಎಳೆದೊಯ್ದು ತಿಂದು ಹಾಕಿರುವ ಘಟನೆ ಮಾಗಡಿ ತಾಲ್ಲೂಕಿನ ಕದರಯ್ಯನ ಪಾಳ್ಯದಲ್ಲಿ ನಡೆದಿದೆ.

ಮೂರೂವರೆ ವರ್ಷದ ಹೇಮಂತ್ ಚಿರತೆ ಬಾಯಿಗೆ ಸಿಲುಕಿ ಸಾವನ್ನಪ್ಪಿದ ಕಂದಮ್ಮ.
ನಿನ್ನೆ ರಾತ್ರಿ ಜೋರು ಮಳೆಗೆ ವಿದ್ಯುತ್ ಕಡಿತಗೊಂಡಿತ್ತು. ಹೀಗಾಗಿ ಸೆಖೆ ಎಂದು ಮನೆಯವರು ಬಾಗಿಲು ತೆರೆದು ಮಲಗಿದ್ದರು.

ಮನೆಯವರು ಬೆಳಗ್ಗೆ ಎದ್ದು ನೋಡಿದಾಗ ಮಗು ಮನೆಯಲ್ಲಿರಲಿಲ್ಲ. ಗಾಬರಿಗೊಂಡು ಹುಡುಕಾಡಿದಾಗ ಸುಮಾರು 60 ಮೀಟರ್ ದೂರದ ಪೊದೆಯೊಂದರಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಮಗುವಿನ ದೇಹವನ್ನು ಚಿರತೆ ಅರ್ಧಂಬರ್ಧ ತಿಂದು ಹಾಕಿ ನಾಪತ್ತೆಯಾಗಿತ್ತು. ರಾತ್ರಿ ಎಲ್ಲರೂ ನಿದ್ರಿಸುತ್ತಿದ್ದ ವೇಳೆಯಲ್ಲಿ ಚಿರತೆ ಮನೆಗೆ ನುಗ್ಗಿ ಮಗುವನ್ನು ಎಳೆದೊಯ್ದಿದೆ.
ಈ ಘಟನೆಯಿಂದ ಕದರಯ್ಯನ ಪಾಳ್ಯದ ಗ್ರಾಮದಲ್ಲಿ ಆತಂಕ ಉಂಟಾಗಿದೆ. ನರ ಭಕ್ಷಕ ಚಿರತೆ ಬೇಟೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

ಮಾಗಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಆಗಾಗ ಒಂಟಿ ಚಿರತೆ ಕಾಣಿಸಿಕೊಳ್ಳುತ್ತಿದ್ದ ಬಗ್ಗೆ ವರದಿಯಾಗುತ್ತಿತ್ತು. ಆದರೆ ಚಿರತೆ ನರ ಭಕ್ಷಕವಾಗಿರುವುದರಿಂದ ಸ್ಥಳೀಯರು ಚಿಂತೆಗೀಡಾಗಿದ್ದಾರೆ. ಆದಷ್ಟು ಬೇಗ ನರಭಕ್ಷಕ ಚಿರತೆ ಬೇಟೆಯಾಡಬೇಕು ಎಂದು ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin