“ಪರವಾನಗಿ ಪಡೆದ ಆಯುಧ ದುರುಪಯೋಗಪಡಿಸಿಕೊಂಡರೆ ಕ್ರಮ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.18- ಪರವಾನಗಿ ಪಡೆದ ಆಯುಧಗಳನ್ನು ದುರುಪಯೋಗ ಪಡಿಸಿಕೊಂಡಿದ್ದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ವಿಧಾನಸಭೆಯಲ್ಲಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸದಸ್ಯ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2018ರಿಂದ 2021ರವರೆಗೆ 5794 ಮಂದಿ, ಆಯುಧಗಳ ಪರವಾನಗಿಗೆ ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ 2509 ಮಂದಿಗೆ ಅನುಮತಿ ನೀಡಲಾಗಿದೆ. ಬಾಕಿ ಉಳಿದವರು ಅಗತ್ಯ ದಾಖಲೆಗಳು ಇಲ್ಲದ ಕಾರಣಕ್ಕಾಗಿ ಪರಾವನಗಿ ನೀಡಲಾಗಿಲ್ಲ ಎಂದರು.

3214 ಮಂದಿ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅವು ಬಾಕಿ ಉಳಿದಿವೆ ಎಂದು ಹೇಳಿದರು. ಕೆಲವರು ಪರಾವನಗಿ ಪಡೆದ ಶಸ್ತ್ರಾಸ್ತ್ರಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಕ್ರಿಮಿನಲ್ ಹಿನ್ನೆಲೆಯುಳ್ಳವರು ಪರವಾನಗಿ ಪಡೆಯುತ್ತಿದ್ದಾರೆ ಎಂದು ವಲ್ಯಾಪುರೆ ತಿಳಿಸಿದಾಗ, ಪರವಾನಗಿ ನೀಡಲು ಕಠಿಣ ಕಾನೂನಿದೆ. ಯಾವುದೇ ಪ್ರಕರಣಗಳಲ್ಲಿ ದುರುಪಯೋಗವಾಗಿರುವ ಮಾಹಿತಿ ಇದ್ದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಬೆಂಗಳೂರು ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲಾಗುತ್ತಿಲ್ಲ ಎಂದು ಜೆಡಿಎಸ್ ಶಾಸಕ ಕಾಂತರಾಜ್ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಮೆಟ್ರೊ ಸಂಸ್ಥೆ ಈವರೆಗೂ 1107 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಕೌಶಲ್ಯ ಆಧಾರಿತವಾಗಿ ನೇಮಕಾತಿಯಾಗಿದೆ.

ಈ ವೇಳೆ ನೇಮಕಾತಿಯಲ್ಲಿ ಕೊಂಚ ವಿಳಂಬವಾಗಿರಬಹುದು. ಕನ್ನಡಿಗರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು. ಇದೇ ವಿಷಯಕ್ಕೆ ಈ ಮೊದಲು ಚರ್ಚೆಯಾಗಿತ್ತು. ಸಾಕಷ್ಟು ಉತ್ತರ ನೀಡಿದ್ದೇವೆ. ಮತ್ತಷ್ಟು ಚರ್ಚಿಸುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು. ಕನ್ನಡಿಗರಿಗೆ ಉದ್ಯೋಗ ನೀಡದೇ ಇರುವ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸಬೇಕೆಂದು ಸದಸ್ಯರು ಹೇಳಿದಾಗ ಅದರ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.

Facebook Comments