ಗುಡುಗು-ಸಿಡಿಲಿನ ಅಬ್ಬರಕ್ಕೆ 130 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ಪಾಟ್ನಾ/ಲಕ್ನೋ, ಜೂ.27- ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ಮಿಂಚು-ಗುಡುಗು-ಸಿಡಿಲಿನ ಆರ್ಭಟದಿಂದ ಮೃತಪಟ್ಟವರ ಸಂಖ್ಯೆ 130ಕ್ಕೇರಿದೆ. ಈ ಪ್ರಕೃತಿ ವಿಕೋಪದಲ್ಲಿ ಅನೇಕರಿಗೆ ಗಾಯಗಳಾಗಿದ್ದು, ಕೆಲವರು ಕಣ್ಮರೆಯಾಗಿದ್ದಾರೆ.

ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.  ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳ ಹಲವೆಡೆ ಕಳೆದ ಮೂರು ದಿನಗಳಿಂದ ಭಾರೀ ಮಳೆ ಮತ್ತು ಮಿಂಚು-ಗುಡುಗು-ಸಿಡಿಲಿನಿಂದ ಈವರೆಗೆ 130ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಪ್ರಕೃತಿ ವಿಕೋಪದಲ್ಲಿ 100ಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿವೆ.

ಬಿಹಾರದಲ್ಲಿ ಈವರೆಗೆ 100 ಮಂದಿ ಮತ್ತು ಉತ್ತರ ಪ್ರದೇಶದಲ್ಲಿ 30 ಜನರು ಸಾವಿಗೀಡಾಗಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ. ಇನ್ನೂ ಕೆಲ ಮಂದಿ ನಾಪತ್ತೆಯಾಗಿದ್ದಾರೆ.

ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.  ಸಿಡಿಲಿನ ಅಬ್ಬರಕ್ಕೆ ಬಿಹಾರದ ಗೋಪಾಲ್‍ಗಂಜ್, ಸಿವಾನ್, ಮಧುಬನಿ, ಮೋತಿಹಾರಿ, ಮತ್ತು ದರ್ಭಾಂಗ ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಮೃತರ ಕುಟುಂಬಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಲಾ 4 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.  ಉತ್ತರ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಸಾವು: ಉತ್ತರ ಪ್ರದೇಶದ ಹಲವೆಡೆ ಮಿಂಚು-ಗುಡುಗು ಅಬ್ಬರಕ್ಕೆ 30ಕ್ಕೂ ಹೆಚ್ಚು ಜನರು ಅಸುನೀಗಿದ್ದು, ಹಲವರು ತೀವ್ರ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದ ದಿಯೋರಾ ಮತ್ತಿತರ ಜಿಲ್ಲೆಗಳಲ್ಲಿ ಗುಡುಗು-ಸಿಡಿಲಿನ ಆರ್ಭಟದಿಂದ ಸಾವು-ನೋವು ಸಂಭವಿಸಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರ ಪ್ರಕಟಿಸಿದ್ದಾರೆ.

Facebook Comments