ಲಿಂಗಾಂಬುದಿ ಕೆರೆಯಲ್ಲಿ ಶೋವೆಲರ್ ಪಕ್ಷಿಗಳ ನಿಗೂಢ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ನ.16- ನಗರದ ಲಿಂಗಾಂಬುದಿ ಕೆರೆಯಲ್ಲಿ ವಿಶೇಷ ನಾಥರನ್ ಶೋವೆಲರ್ ಪಕ್ಷಿಗಳು ಮೃತಪಟ್ಟಿವೆ.  ಶೋವೆಲರ್ ಪಕ್ಷಿಗಳು ಪ್ರತಿ ವರ್ಷ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಲಿಂಗಾಂಬುದಿ ಕೆರೆಗೆ ಬಂದು ಬೀಡುಬಿಡುತ್ತವೆ. ಈ ಸಂದರ್ಭದಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆದರೆ ಕಳೆದೆರಡು ದಿನಗಳಿಂದ ಪಕ್ಷಿಗಳು ಒಂದೊಂದಾಗಿ ಸಾವನ್ನಪ್ಪತ್ತಿದ್ದು, ಇಂದು ಐದು ಪಕ್ಷಿಗಳ ದೇಹ ಕೆರೆಯ ದಂಡೆಯಲ್ಲಿ ತೇಲುತಿದದ್ದು ಪತ್ತೆಯಾಗಿದೆ.

ವಾಯು ವಿಹಾರಕ್ಕೆ ಬಂದವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಬೋಟ್ ಮೂಲಕ ಇಡೀ ಕೆರೆಯನ್ನೇ ತಪಾಸಣೆ ಮಾಡಿದರು.  ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಪ್ರಶಾಂತ್, ಪಕ್ಷಿಗಳ ಮೃತದೇಹದ ಸ್ಯಾಂಪಲ್‍ಗಳನ್ನು ಬೆಂಗಳೂರಿಗೆ ಕಳುಹಿಸಲಾಗುವುದು. ಕೆರೆಯಲ್ಲಿರುವ ಇತರೆ ಪಕ್ಷಿಗಳಿಗೆ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಶೋವೆಲರ್ ಪಕ್ಷಿಗಳು ಸಾವನ್ನಪ್ಪಲು ಕಾರಣ ತಿಳಿದುಬಂದಿಲ್ಲ. ರಾಜಸ್ಥಾನದಲ್ಲೂ ಈ ಪಕ್ಷಿಗಳು ಮೃತಪಟ್ಟಿವೆ.ಹಾಗಾಗಿ ಎರಡೂ ಕಡೆ ಇವುಗಳ ಸಾವಿಗೆ ಸಾಮ್ಯತೆ ಇದೆಯೇ ಎಂಬುದರ ಕುರಿತು ರಾಜಸ್ಥಾನ ಅರಣ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.

ಇವು ವಿಶೇಷ ಪಕ್ಷಿಗಳಾಗಿರುವುದರಿಂದ ಇವುಗಳ ಸಂರಕ್ಷಣೆ ಅತಿಮುಖ್ಯವಾಗಿದೆ. ಹಾಗಾಗಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇನ್ನು ಈ ಕೆರೆಯಲ್ಲಿ ಎಷ್ಟು ಪಕ್ಷಿಗಳು ಮೃತಪಟ್ಟಿವೆ ಎಂಬುದು ಸಂಜೆ ವೇಳೆಗೆ ಗೊತ್ತಾಗಲಿದೆ ಎಂದು ತಿಳಿಸಿದರು.

Facebook Comments