ಸರ್ಕಾರದ ಅಸಡ್ಡೆ ಧೋರಣೆ ಖಂಡಿಸಿ, ಶಿವರುದ್ರಪ್ಪ-ಅನಂತಮೂರ್ತಿ ಸಮಾಧಿ ಸ್ವಚ್ಛಗೊಳಿಸಿದ ಸಾಹಿತಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಸಾಹಿತಿಗಳಾದ ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರ ಸಮಾಧಿಗಳು ಅನಾಥವಾಗಿವೆ. ಅವರ ಸಮಾಧಿಗಳ ಸುತ್ತ ಗಿಡ-ಗಂಟೆಗಳು ಬೆಳೆದು ನಿಂತಿದ್ದರೂ ಅತ್ತ ಕಡೆ ಯಾರೂ ಗಮನ ಕೊಡದೆ ಮೇರು ಸಾಹಿತಿಗಳಿಗೆ ಅಗೌರವ ತೋರುತ್ತಿರುವ ಸರ್ಕಾರದ ಅಸಡ್ಡೆ ಧೋರಣೆ ಖಂಡಿಸಿ ಅನೇಕ ಸಾಹಿತಿಗಳು, ಪ್ರಗತಿಪರರು ಇಂದು ಸಮಾಧಿ ಸ್ಥಳವನ್ನು ಸ್ವಚ್ಛಗೊಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಪಕ್ಕದ ಕುವೆಂಪು ಕಲಾ ಗ್ರಾಮದ ಮಲ್ಲತ್ತಳ್ಳಿಯಲ್ಲಿರುವ ಸಮಾಧಿ ಸ್ಥಳದಲ್ಲಿ ಡಾ.ವಡ್ಡಗೆರೆ ನಾಗರಾಜಯ್ಯ, ಸಿ.ಆರ್.ಚಂದ್ರಶೇಖರ್, ಪುಸ್ತಕಮನೆ ಹರಿಹರಪ್ರಿಯ, ಎಂ.ಗೌರಮ್ಮ, ನಜಜ್ಞಾ ನಜೀರ್ ಚಿಕ್ಕೆನೇರಳೆ, ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕವಿಗಳು, ಸಾಹಿತಿಗಳು, ಕಲಾವಿದರು ಪಾಲ್ಗೊಂಡು ಸಮಾಧಿಯ ಸುತ್ತಮುತ್ತಲ ಜಾಗವನ್ನು ಶುಚಿಗೊಳಿಸಿದರು.

ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಸಾಹಿತಿಗಳ ಸಮಾಧಿಗಳ ಪಾವಿತ್ರ್ಯಕ್ಕೆ ಭಂಗವಾಗಿದೆ. ಹಾಗಾಗಿ ಈ ಜಾಗವನ್ನು ಶುಚಿಗೊಳಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕಾಯಕಲ್ಪ ನೀಡಿದ ಈ ಮೇರು ದಿಗ್ಗಜರಿಗೆ ಗೌರವ ಸಲ್ಲಿಸಿದ್ದೇವೆ ಮತ್ತು ಸರ್ಕಾರದ ನಿರ್ಲಕ್ಷ್ಯದ ಧೋರಣೆ ಖಂಡಿಸಿದ್ದೇವೆ ಎಂದು ವಡ್ಡಗೆರೆ ನಾಗರಾಜಯ್ಯ ಮತ್ತು ಪುಸ್ತಕಮನೆ ಹರಿಹರಪ್ರಿಯ ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಈ ಜವಾಬ್ದಾರಿ ಯನ್ನು ಹೊತ್ತು ಈ ಸ್ಥಳವನ್ನು ಅಚ್ಚುಕಟ್ಟಾಗಿ ಇಡಬೇಕಿತ್ತು. ಮುಂದಿನ ಪೀಳಿಗೆಗೆ ಈ ದಿಗ್ಗಜರ ಸಮಾಧಿ ಸ್ಥಳವನ್ನು ಸ್ಮಾರಕವನ್ನಾಗಿ ಮಾಡಬೇಕಿತ್ತು. ಆದರೆ ಸಮಾಧಿ ಸುತ್ತ ಕುರುಚಲು ಗಿಡ ಗಂಟೆ, ಕಸ ಬೆಳೆದು ನಿಂತಿದ್ದರು ಅತ್ತ ಕಡೆ ಗಮನಕೊಡದೆ ಮೇರು ಸಾಹಿತಿಗಳಿಗೆ ಅವಮಾನ ಮಾಡುವ ಕೆಲಸ ಮಾಡಲಾಗಿದೆ ಎಂದು ಅವರು ಕಿಡಿಕಾರಿದರು.

ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಗೌರವವನ್ನು ಉಳಿಸಬೇಕಿರುವುದು ಕನ್ನಡಿಗರಾದ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಹಾಗಾಗಿ ನಾವು ಈ ಕೆಲಸಕ್ಕೆ ಮುಂದಾಗಿದ್ದೇವೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

Facebook Comments