14 ನಗರಸ್ಥಳೀಯ ಸಂಸ್ಥೆಗಳಿಗೆ ಶಾಂತಿಯುತ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.12-ರಾಜ್ಯದ ಎರಡು ಮಹಾನಗರ ಪಾಲಿಕೆ, ಆರು ನಗರಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯಿತಿಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿಸಂಜೆ 5ಗಂಟೆವರೆಗೂ ನಡೆಯಲಿದೆ.

ದಾವಣಗೆರೆ ಮತ್ತು ಮಂಗಳೂರು ಮಹಾನಗರ ಪಾಲಿಕೆ, ಕನಕಪುರ, ಕೋಲಾರ, ಮುಳಬಾಗಿಲು, ಕೆಜಿಎಫ್, ಚಿಂತಾಮಣಿ ನಗರಸಭೆಗಳಿಗೆ, ಮಾಗಡಿ, ಬಿರೂರು, ಕಂಪ್ಲಿ ಪುರಸಭೆಗಳಿಗೆ ಹಾಗೂ ಶಿವಮೊಗ್ಗ ಜಿಲ್ಲೆಯ ಜೋಗ್-ಕಾರ್ಗಲ್, ಕೂಡ್ಲಿಗಿ, ಕುಂದಗೋಳ ಪಟ್ಟಣಪಂಚಾಯ್ತಿಗೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳ 409 ವಾರ್ಡ್‍ಗಳಿಗೆ ಮತದಾನ ನಡೆಯಿತು.

ಕಾಂಗ್ರೆಸ್ 386, ಬಿಜೆಪಿ 363, ಜೆಡಿಎಸ್ 233, ಸಿಪಿಐ 7, ಸಿಪಿಐ(ಎಂ) 12, ಬಿಎಸ್‍ಪಿ 24, ಪಕ್ಷೇತರರು 475 ಅಭ್ಯರ್ಥಿಗಳು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣದಲ್ಲಿ ಒಟ್ಟು 1087 ಅಭ್ಯರ್ಥಿಗಳಿದ್ದಾರೆ. ಈ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಮತ ಚಲಾಯಿಸುವ ಮೂಲಕ ಇಂದು ನಿರ್ಧಾರ ಮಾಡಿದ್ದಾರೆ.

ಈಗಾಗಲೇ 9 ವಾರ್ಡ್‍ಗಳಿಗೆ ಅವಿರೋಧ ಆಯ್ಕೆಯಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ನಗರ ಸ್ಥಳೀಯ ಸಂಸ್ಥೆಗಳ 1388 ಮತಗಟ್ಟೆಗಳಲ್ಲಿ, 13,04,614 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ನವೆಂಬರ್ 14ರಂದು ಆಯಾ ತಾಲೂಕು ಕೇಂದ್ರ ಸ್ಥಳದಲ್ಲಿ ಮತಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಈ ಹಿಂದೆಯೇ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ/ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ಕೂಡ ಚುನಾವಣೆ ಪ್ರಕಟಿಸಿತ್ತು.  ಉಪಚುನಾವಣೆ : ಸದಸ್ಯರ ನಿಧನದಿಂದ ತೆರವಾಗಿದ್ದ ಹೊಳೆನರಸೀಪುರ ಪುರಸಭೆಯ ವಾರ್ಡ್ ನಂ.4 , ಕೊಳ್ಳೆಗಾಲ ನಗರಸಭೆಯ ವಾರ್ಡ್ ನಂ.19, ಚಡಚಣ ಪಟ್ಟಣ ಪಂಚಾಯ್ತಿಯ ವಾರ್ಡ್ ನಂ.5, ಮಹಾಲಿಂಗಪುರ ಪುರಸಭೆಯ ವಾರ್ಡ್ ನಂ.17, ಚಿತ್ತಾಪುರ ಪುರಸಭೆಯ ವಾರ್ಡ್ ನಂ.10ಕ್ಕೆ ಇಂದು ಉಪಚುನಾವಣೆ ನಡೆಯಿತು.

Facebook Comments